ಮೈಸೂರು: ದೇಶದಲ್ಲಿ ಮಾರುಕಟ್ಟೆ, ಜಾತಿ ಮತ್ತು ಧರ್ಮ ಹಾಗೂ ಅಧಿಕಾರ ಕೇಂದ್ರಗಳೆಂಬ ತ್ರಿಕೋನ ಶಕ್ತಿಗಳು ಶಿಕ್ಷಣವನ್ನು ನಿಯಂತ್ರಿಸುತ್ತಿವೆ ಎಂದು ಶಿಕ್ಷಣ ತಜ್ಞ ಬಿ.ಶ್ರೀಪಾದ ಭಟ್ ಬೇಸರ ವ್ಯಕ್ತಪಡಿಸಿದರು.
ಭಾರತೀಯ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ನಗರದ ಐಡಿಯಲ್ ಜಾವಾ ರೋಟರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ‘ಪದವಿ ವಿದ್ಯಾರ್ಥಿಗಳಿಗಾಗಿ ಎನ್‌ಇಪಿ ಸಂವಾದ’ದಲ್ಲಿ ಅವರು ವಿಷಯ ಮಂಡಿಸಿದರು.
ಶಿಕ್ಷಣವನ್ನು ಸಾರ್ವತ್ರಿಕಗೊಳಿಸಿಲ್ಲ. ಇದು ಶಿಕ್ಷಣದ ಬಿಕ್ಕಟ್ಟಾಗಿ ಪರಿಣಮಿಸಿದೆ. ಜಾತಿ, ವರ್ಗ, ಧರ್ಮ ಆಧಾರಿತ ಶಿಕ್ಷಣವಿದೆ. ಬಡವರು, ಮಧ್ಯಮ ವರ್ಗದವರು, ತಳಸಮುದಾಯದವರು, ಅಲ್ಪಸಂಖ್ಯಾತರು, ಶ್ರೀಮಂತರು ಹೀಗೆ ಒಂದೊಂದು ಖಾನೆಗಳನ್ನಾಗಿ (ಕಂಪಾರ್ಟ್‌ಮೆಂಟ್) ಮಾಡಿ, ಶಿಕ್ಷಣ ನೀಡಲಾಗುತ್ತಿದೆ ಎಂದು ಶ್ರೀಪಾದ ಭಟ್ ಬೇಸರ ವ್ಯಕ್ತಪಡಿಸಿದರು.
ಎನ್ಇಪಿ ಸಂವಿಧಾನಕ್ಕೆ ಬದ್ದವಾಗಿಲ್ಲ:
ರಾಷ್ಟ್ರೀಯ ಶಿಕ್ಷಣ ನೀತಿಯು (ಎನ್‌ಇಪಿ) ಸಂವಿಧಾನದ ನೀತಿ–ನಿಯಮ ಹಾಗೂ ಪ್ರಜಾಪ್ರಭುತ್ವದ ಆಶಯಗಳಿಗೆ ಬದ್ಧವಾಗಿಲ್ಲ. ಸಾಮಾಜಿಕ ನ್ಯಾಯದ ಪರವಾಗಿಲ್ಲ. ಯಾವುದೇ ಶಿಕ್ಷಣ ನೀತಿಯನ್ನು ರೂಪಿಸುವ ಮುನ್ನ ಸಂವಿಧಾನದ ನೀತಿ, ನಿಯಮ ಪಾಲಿಸಬೇಕು. ಪ್ರಜಾಪ್ರಭುತ್ವದ ಆಶಯಗಳಿಗೆ ಬದ್ಧವಾಗಿರಬೇಕು. ಜಾಗತಿಕ ಮಟ್ಟದ ಶೈಕ್ಷಣಿಕ ಬೆಳವಣಿಗೆಗಳ ಕುರಿತು ತೌಲನಿಕ ಅಧ್ಯಯನ ನಡೆಸಬೇಕು. ಸಾಮಾಜಿಕ ನ್ಯಾಯದ ಪರವಾಗಿರಬೇಕು. ಶಿಕ್ಷಣದಿಂದ ವಂಚಿತವಾಗಿರುವವರನ್ನು ಒಳಗೊಳ್ಳಬೇಕು’ ಎಂದು ತಿಳಿಸಿದರು.
ಹೊಸ ಶಿಕ್ಷಣ ನೀತಿಯಲ್ಲಿ ಸಂವಿಧಾನದ ಪರಿಚ್ಛೇದಗಳ ಬಗ್ಗೆ ಉಲ್ಲೇಖವಿಲ್ಲ. 30 ರಾಜ್ಯಗಳು, 7 ಕೇಂದ್ರಾಡಳಿತ ಪ್ರದೇಶಗಳ ಜತೆ ಚರ್ಚಿಸಿಲ್ಲ. ಆದರೆ, ಆರ್‌ಎಸ್‌ಎಸ್ ಅಂಗಸಂಸ್ಥೆಗಳಾದ ಭಾರತೀಯ ಶಿಕ್ಷಣ ಮಂಡಲ್, ಶಿಕ್ಷ ಸಂಸ್ಕೃತಿ ಉತ್ಥಾನ ನ್ಯಾಸ್ ಹಾಗೂ ಭಾರತೀಯ ಭಾಷಾ ಮಂಜ್ ಜಂಟಿಯಾಗಿ 40 ಸೆಮಿನಾರ್‌ಗಳನ್ನು ಏರ್ಪಡಿಸಿದ್ದವು. 6 ಸಾವಿರ ಶೈಕ್ಷಣಿಕ ವಲಯದವರು ಹಾಗೂ ಸಂಸ್ಥೆಗಳ ಮಾಲೀಕರೊಂದಿಗೆ ಸಮಾಲೋಚನೆ ನಡೆಸಿ ಅಭಿಪ್ರಾಯ ಪಡೆಯಲಾಗಿತ್ತು’ ಎಂದರು.
10 ಲಕ್ಷ ಜನರ ಅಭಿಪ್ರಾಯ ಪಡೆದು ಎನ್‌ಇಪಿಯನ್ನು ಜಾರಿಗೊಳಿಸಲಾಗಿದೆ ಎಂದು ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ. ಆದರೆ, ಈ ಸಂಬಂಧ ಸಿದ್ಧಪಡಿಸಿದ್ದ ಪ್ರಶ್ನಾವಳಿಯನ್ನು ನಾನು ಗಮನಿಸಿದ್ದೇನೆ. ನಿಮ್ಮ ಶಾಲೆಯಲ್ಲಿ ಶೌಚಾಲಯ ಇದೆಯೇ? ಗುಣಮಟ್ಟದ ಶೌಚಾಲಯ ಬೇಕೇ? ಎಲ್ಲ ಶಾಲೆಗಳಿಗೆ ಶಿಕ್ಷಕರು ಬೇಕೇ’ ಎಂಬ ಪ್ರಶ್ನೆಗಳನ್ನು ಕೇಳಿದ್ದಾರೆ. ಶಾಲೆಗೆ ಮೂಲಸೌಕರ್ಯ ಬೇಕೇ ಎಂದು ಕೇಳಿದರೆ, ಎಲ್ಲ ವಿದ್ಯಾರ್ಥಿಗಳೂ ಬೇಕು ಎಂದೇ ಉತ್ತರಿಸುತ್ತಾರೆ. ಇದನ್ನೇ ಎನ್‌ಇಪಿಗೆ ಅನ್ವಯಿಸಲಾಗಿದೆ’ ಎಂದು ಆರೋಪಿಸಿದರು.