ವಾಷಿಂಗ್ಟನ್ : ತೆರಿಗೆ ಸಮರ ಆರಂಭಿಸಿ ಭಾರತ, ಚೀನಾದ ಕೆಂಗಣ್ಣಿಗೆ ಗುರಿಯಾಗಿರುವ ಟ್ರಂಪ್, ಈಗ ಈ ದೇಶಗಳನ್ನು ಒಳಗೊಂಡಂತೆ ಹೊಸ C5 ಅಥವಾ Core 5 ಗ್ರೂಪ್ ರಚಿಸಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯುರೋಪ್ ಪ್ರಾಬಲ್ಯ ಹೊಂದಿರುವ G7 ಮತ್ತು ಇತರ ಸಾಂಪ್ರದಾಯಿಕ ಪ್ರಜಾಪ್ರಭುತ್ವ ಮತ್ತು ಶ್ರೀಮಂತವಾಗಿರುವ ದೇಶಗಳನ್ನು ಬದಿಗಿಟ್ಟು ರಷ್ಯಾ, ಚೀನಾ, ಭಾರತ ಮತ್ತು ಜಪಾನ್ ಜೊತೆಗೂಡಿ ಹೊಸ ‘ಕೋರ್ ಫೈವ್’ ಗುಂಪು ರಚಿಸಲು ಆಸಕ್ತಿ ತೋರಿದ್ದಾರೆ.
ಈ ವಿಚಾರದ ಬಗ್ಗೆ ಇಲ್ಲಿಯವರೆಗೆ ಯಾವುದೇ ಅಮೆರಿಕದ ಅಧ್ಯಕ್ಷರ ನಿವಾಸ ಶ್ವೇತ ಭವನ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ ಹೊಸ ಗುಂಪಿನ ಉದಯದ ಬಗ್ಗೆ ಕಳೆದ ವಾರ ಶ್ವೇತಭವನ ಪ್ರಕಟಿಸಿದ ರಾಷ್ಟ್ರೀಯ ಭದ್ರತಾ ಕಾರ್ಯತಂತ್ರದ ದೀರ್ಘ, ಅಪ್ರಕಟಿತ ಆವೃತ್ತಿಯಲ್ಲಿ ಈ ಕಲ್ಪನೆ ಹುಟ್ಟಿಕೊಂಡಿದೆ ಎಂದು ಅಮೆರಿಕದ ಪೊಲಿಟಿಕೊ ವರದಿ ಮಾಡಿದೆ.
ದೇಶಗಳು ಶ್ರೀಮಂತವಾಗಿರಬೇಕು ಮತ್ತು ಪ್ರಜಾಸತ್ತಾತ್ಮಕವಾಗಿ ಆಡಳಿತ ನಡೆಸಬೇಕು ಎಂಬ G7 ನ ಅವಶ್ಯಕತೆಗಳಿಗೆ ಸೀಮಿತವಾಗಿರದೇ ಹೊಸ ಶಕ್ತಿಗಳನ್ನು ಒಂದುಗೂಡಿಸುವುದು ಇದರ ಉದ್ದೇಶ ಎಂದು ವರದಿಯಾಗಿದೆ.













