ಅಸಮರ್ಪಕ ಆಹಾರ ಪದ್ಧತಿ ಮತ್ತು ಅಸ್ತವ್ಯಸ್ತ ಜೀವನಶೈಲಿಯಿಂದ ಗ್ಯಾಸ್ಟ್ರಿಕ್, ಅಸಿಡಿಟಿ, ಹೊಟ್ಟೆ ಉಬ್ಬರ ಮತ್ತು ಅಜೀರ್ಣ ಸಮಸ್ಯೆಗಳು ಸಾಮಾನ್ಯವಾಗಿವೆ. ಬೆಳಿಗ್ಗೆ ಎದ್ದ ಕ್ಷಣದಿಂದಲೇ ಹೊಟ್ಟೆಯಲ್ಲಿ ಉರಿಯೂತ, ಗ್ಯಾಸ್ ಮತ್ತು ಹೊಟ್ಟೆ ಭಾರವಾದ ಅನುಭವದಿಂದ ಹಲವರು ದಿನವಿಡೀ ಅಸ್ವಸ್ಥರಾಗಿರುತ್ತಾರೆ. ಇದರಿಂದ ಕೆಲಸದಲ್ಲಿ ಏಕಾಗ್ರತೆ ಕಡಿಮೆಯಾಗುವುದು ಮಾತ್ರವಲ್ಲದೆ, ಆಹಾರ ಸೇವಿಸುವ ಆಸಕ್ತಿಯೂ ಕುಗ್ಗುತ್ತದೆ.
ಆಯುರ್ವೇದ ತಜ್ಞೆರ ಪ್ರಕಾರ, ಬೆಳಿಗ್ಗೆ ಕೆಲವು ಸರಳ ಆರೋಗ್ಯಕರ ಅಭ್ಯಾಸಗಳನ್ನು ಪಾಲಿಸಿದರೆ ಗ್ಯಾಸ್ಟ್ರಿಕ್ ಮತ್ತು ಆಸಿಡಿಟಿ ಸಮಸ್ಯೆಯನ್ನು ನಿಯಂತ್ರಿಸಬಹುದು. ವಿಶೇಷವಾಗಿ ದಿನದ ಆರಂಭವೇ ಆರೋಗ್ಯಕರವಾಗಿದ್ದರೆ ಜೀರ್ಣಕ್ರಿಯೆಯೂ ಉತ್ತಮವಾಗಿರುತ್ತದೆ. ಹಾಗಾದರೆ ಹಾಗಾದರೆ ಗ್ಯಾಸ್, ಅಸಿಡಿಟಿಯಿಂದ ಮುಕ್ತಿ ಪಡೆಯಲು ಬೆಳಿಗ್ಗೆ ಎದ್ದು ಏನು ಮಾಡಬೇಕು ಎಂಬುದನ್ನು ಈ ಮೂಲಕ ತಿಳಿದುಕೊಳ್ಳಿ.
ಬೆಚ್ಚಗಿನ ನೀರು ಕುಡಿಯಿರಿ – ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಗ್ಲಾಸ್ ಬೆಚ್ಚಗಿನ ನೀರು ಕುಡಿಯುವುದರಿಂದ ದೇಹದಲ್ಲಿನ ವಿಷಕಾರಿ ಅಂಶಗಳು ಹೊರಹೋಗಲು ಸಹಾಯವಾಗುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸಿ ಅಸಿಡಿಟಿ ಕಡಿಮೆ ಮಾಡಲು ಸಹಕಾರಿಯಾಗುತ್ತದೆ.
ಯೋಗಾಭ್ಯಾಸ ಮಾಡಿ – ವಜ್ರಾಸನ, ಪವನಮುಖ್ತಾಸನ ಮತ್ತು ಬಾಲಾಸನದಂತಹ ಯೋಗಾಸನಗಳು ಹೊಟ್ಟೆಯ ಗ್ಯಾಸ್ ಸಮಸ್ಯೆಯನ್ನು ಕಡಿಮೆ ಮಾಡುತ್ತವೆ. ಜೊತೆಗೆ ದೇಹ ಮತ್ತು ಮನಸ್ಸಿಗೂ ಶಾಂತಿ ನೀಡುತ್ತವೆ.
ಹರ್ಬಲ್ ಪಾನೀಯಗಳನ್ನು ಸೇವಿಸಿ – ಜೀರಿಗೆ ನೀರು, ಅಜ್ವೈನ್ ಚಹಾ ಮತ್ತು ಧನಿಯಾ ನೀರಿನಂತಹ ಹರ್ಬಲ್ ಡ್ರಿಂಕ್ಸ್ ಜೀರ್ಣಕ್ರಿಯೆಗೆ ತುಂಬಾ ಉಪಯುಕ್ತ. ಇವು ಹೊಟ್ಟೆಯ ಉರಿಯೂತ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ತಗ್ಗಿಸಲು ಸಹಾಯ ಮಾಡುತ್ತವೆ. ಖಾಲಿ ಹೊಟ್ಟೆಯಲ್ಲಿ ಚಹಾ ಅಥವಾ ಕಾಫಿ ಸೇವಿಸುವುದನ್ನು ತಪ್ಪಿಸುವುದು ಉತ್ತಮವಾಗಿದೆ.
ಜೀರ್ಣಕ್ರಿಯೆ ಸುಧಾರಿಸಲು ಏನು ಮಾಡಬೇಕು? – ನಿಯಮಿತ ಸಮಯಕ್ಕೆ ಸಮತೋಲನಯುತ ಆಹಾರ ಸೇವನೆ, ಸಾಕಷ್ಟು ನೀರು ಕುಡಿಯುವುದು, ದಿನನಿತ್ಯ ವ್ಯಾಯಾಮ ಮತ್ತು 8 ಗಂಟೆಗಳ ಸಮರ್ಪಕ ನಿದ್ರೆ ಜೀರ್ಣಕ್ರಿಯೆ ಉತ್ತಮವಾಗಿಡಲು ಮುಖ್ಯವಾಗಿದೆ. ಗ್ಯಾಸ್ಟ್ರಿಕ್ ಅಥವಾ ಆಸಿಡಿಟಿ ಸಮಸ್ಯೆ ನಿರಂತರವಾಗಿ ಕಾಣಿಸಿಕೊಂಡರೆ ಸ್ವಯಂ ಚಿಕಿತ್ಸೆ ಮಾಡದೆ ವೈದ್ಯರ ಸಲಹೆ ಪಡೆಯುವುದು ಅಗತ್ಯವಾಗಿದೆ.
















