ಬೆಂಗಳೂರು: ಅಂತಾರಾಜ್ಯ ಮಟ್ಟದ ಬೃಹತ್ ಮಾದಕ ಜಾಲವನ್ನು ಭೇದಿಸುವಲ್ಲಿ ಹೆಬ್ಬಾಳ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ದೆಹಲಿಯಿಂದ ಬೆಂಗಳೂರಿಗೆ ಮಾದಕ ಪದಾರ್ಥ ತಂದು ಮಾರಾಟ ಮಾಡುತ್ತಿದ್ದ ಆರೋಪದಡಿ ಸೆನೆಗಲ್ ಮೂಲದ ಡನ್ಫಾ ಗೆರಾಲ್ಡ್, ತಾಂಜೇನಿಯಾ ಮೂಲದ ಮೆಗ್ರಾತ್, ನೈಜೀರಿಯಾ ಮೂಲದ ಒಬಿಯಾನಿಜ್ ರೀಟಾ, ದೆಹಲಿ ಮೂಲದ ರೀನಾ ಯಾದವ್, ದೆಬಾಶಿಶ್ ಬ್ಯಾನರ್ಜಿ ಮತ್ತು ಬೆಂಗಳೂರಿನ ಪೆಡ್ಲರ್‌ಗಳಾದ ಧೀರಜ್, ಮೊಹಮ್ಮದ್ ಮನ್ಸೂರ್ ಹಾಗೂ ಅಬ್ದುಲ್ ಸಮದ್ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಬರೋಬ್ಬರಿ 35 ಕೋಟಿ ರೂ. ಮೌಲ್ಯದ 17.4 ಕೆ.ಜಿ. ಎಂಡಿಎಂಎ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂಶಯ ಬಾರದಂತೆ ಸೀರೆಗಳು, ಇಸ್ತ್ರಿ ಮಾಡಲು ಬಳಸುವ ಟೇಬಲ್‌ಗಳು ಮತ್ತು ಕುರ್ಚಿಗಳ ಒಳಭಾಗದಲ್ಲಿ ಎಂಡಿಎಂಎ ಕ್ರಿಸ್ಟಲ್‌ಗಳನ್ನು ಅಡಗಿಸಿ, ಸುಂದರವಾದ ಉಡುಗೊರೆಗಳಂತೆ ಆರೋಪಿಗಳು ಪ್ಯಾಕ್ ಮಾಡುತ್ತಿದ್ದರು.

ನಂತರ ಅವುಗಳನ್ನು ಚಾಣಾಕ್ಷತನದಿಂದ ದೆಹಲಿಯಿಂದ ರೈಲಿನ ಮೂಲಕ ಬೆಂಗಳೂರಿಗೆ ತರುತ್ತಿದ್ದರು. ಹೀಗೆ ಬೆಂಗಳೂರು ತಲುಪುವ ಮಾದಕವನ್ನು ನಿರ್ಜನ ಪ್ರದೇಶಗಳಲ್ಲಿ ಕಾರಿನಲ್ಲಿಟ್ಟುಕೊಂಡು ಮಾರಾಟ ಮಾಡುತ್ತಿದ್ದರು. ಇದೇ ರೀತಿ ಹೆಬ್ಬಾಳದ ಆನಂದನಗರದ ಸಮೀಪ ದಂಧೆಯಲ್ಲಿ ತೊಡಗಿದ್ದ ಮೂವರನ್ನು ವಶಕ್ಕೆ ಪಡೆದಿದ್ದ ಪೊಲೀಸರು 4 ಕೆ.ಜಿ. 300 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದರು. ಬಳಿಕ ಸರ್ಜಾಪುರದ ಚೂಡಸಂದ್ರದಲ್ಲಿರುವ ಸ್ಥಳೀಯ ಪೆಡ್ಲರ್ ಮೊಹಮ್ಮದ್ ಮನ್ಸೂರ್ ನಿವಾಸದ ಮೇಲೆ ದಾಳಿ ಮಾಡಿದಾಗ 10 ಕೆ.ಜಿ ಎಂಡಿಎಂಎ ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ಅಬ್ದುಲ್ ಸಮದ್ ಎಂಬಾತನ ಹೆಣ್ಣೂರಿನ ನಿವಾಸದ ಮೇಲೆಯೂ ದಾಳಿ ನಡೆಸಿ 3.5 ಕೆ.ಜಿ ಮಾದಕ ವಸ್ತುವನ್ನು ಜಪ್ತಿ ಮಾಡಲಾಯಿತು. ವಿಚಾರಣೆ ವೇಳೆ, ದೆಹಲಿ ಮತ್ತು ಹರಿಯಾಣದವರೆಗೂ ಆರೋಪಿಗಳ ಜಾಲ ವಿಸ್ತರಿಸಿರುವುದು ಬಯಲಾಗಿತ್ತು. ಸುಮಾರು 40 ಜನ ಪೊಲೀಸ್ ಸಿಬ್ಬಂದಿಗಳ ವಿಶೇಷ ತಂಡ ದೆಹಲಿಯಲ್ಲಿ ಒಂದು ವಾರಕ್ಕೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಹೆಡೆಮುರಿಕಟ್ಟಿದೆ.
ಆದರಿಂದ ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಬಿ.ಎಸ್. ನೇಮಗೌಡ ಹಾಗೂ ಜೆ.ಸಿ.ನಗರ ಎಸಿಪಿ ಕೆ.ಎಸ್. ತನ್ವಿರ್ ಅವರ ನೇರ ಮಾರ್ಗದರ್ಶನದಲ್ಲಿ ನಡೆದಿರುವ ಈ ಬೃಹತ್ ಕಾರ್ಯಾಚರಣೆಯನ್ನು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಶ್ಲಾಘಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ ಮುಂಬೈನಲ್ಲಿ ಸಕ್ರಿಯವಾಗಿದ್ದ ಅಂತಾರಾಷ್ಟ್ರೀಯ ಮಾದಕ ದ್ರವ್ಯ ಮಾರಾಟ ಜಾಲವನ್ನು ಮಾದಕ ವಸ್ತು ನಿಯಂತ್ರಣ ಬ್ಯೂರೋಭೇದಿಸಿತ್ತು. ಪ್ರಕರಣದಲ್ಲಿ 1,745 ಕೋಟಿ ರೂ. ಮೌಲ್ಯದ 349 ಕಿಲೋಗ್ರಾಂ ಹೈಗ್ರೇಡ್ ಕೊಕೇನ್ ವಶಪಡಿಸಿಕೊಳ್ಳಲಾಗಿತ್ತು ಎಂದು ಮಾಹಿತಿ ತಿಳಿದುಬಂದಿದೆ.
















