ಬೆಂಗಳೂರು(Bengaluru): ಸರಣಿ ಭೂಕಂಪದಿಂದ ತತ್ತರಿಸಿರುವ ಟರ್ಕಿ ಮತ್ತು ಸಿರಿಯಾದಲ್ಲಿ ಸಿಲುಕಿದ ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಿದ್ದು, ವಿಶೇಷ ಸಹಾಯವಾಣಿಯಯನ್ನು ಆರಂಭಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭೂಕಂಪ ಸಂಭವಿಸಿರುವ ಟರ್ಕಿ ಮತ್ತು ಸಿರಿಯಾದಲ್ಲಿ ಕನ್ನಡಿಗರು ಸಿಲುಕಿದ್ದರೆ ತಕ್ಷಣ ಮಾಹಿತಿ ನೀಡುವಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ತಿಳಿಸಲಾಗಿದೆ ಎಂದು ಹೇಳಿದರು.
ಸಚಿವಾಲಯದ ಜತೆ ಸರಕಾರ ನಿರಂತರ ಸಂಪರ್ಕದಲ್ಲಿದೆ. ಟರ್ಕಿ ರಾಯಭಾರ ಕಚೇರಿಯಿಂದಲೂ ಕನ್ನಡಿಗರ ಬಗ್ಗೆ ಎಲ್ಲಾ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ. ಬೆಂಗಳೂರಿನಲ್ಲೂ ಸಹಾಯವಾಣಿ ಸ್ಥಾಪಿಸುತ್ತೇವೆ. ಟರ್ಕಿ ಮತ್ತು ಸಿರಿಯಾದಲ್ಲಿ ನೆಲೆಸಿರುವ ಕನ್ನಡಿಗರ ಬಗ್ಗೆ ಕುಟುಂಬ ಸದಸ್ಯರು ಮಾಹಿತಿ ನೀಡಿದರೆ ಅವರನ್ನು ಸಂಪರ್ಕಿಸಿ ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರಲು ನೆರವು ಒದಗಿಸುತ್ತೇವೆ ಎಂದು ಹೇಳಿದರು.
ಪ್ರಬಲ ಸರಣಿ ಭೂಕಂಪದಿಂದ ತತ್ತರಿಸಿರುವ ಟರ್ಕಿ ಮತ್ತು ಸಿರಿಯಾದಲ್ಲಿ ಎರಡನೇ ದಿನವಾದ ಮಂಗಳವಾರವೂ ರಿಕ್ಟರ್ ಮಾಪಕದಲ್ಲಿ 5 ಕ್ಕಿಂತಲೂ ಅಧಿಕ ತೀವ್ರತೆಯ ಮೂರು ಭೂಕಂಪನಗಳು ಸಂಭವಿಸಿದ್ದು, ಮತ್ತಷ್ಟು ಕಟ್ಟಡಗಳು ಕುಸಿದಿವೆ. ಆಸ್ಪತ್ರೆ ಕಟ್ಟಡಗಳೂ ಕುಸಿದಿರುವುದರಿಂದ ಗಾಯಾಳುಗಳ ಚಿಕಿತ್ಸೆಗೂ ಪರದಾಡುವಂತಾಗಿದೆ.