ಬೆಂಗಳೂರು: ಮನೆಯ ಮುಂಭಾಗ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳ್ಳತನ ಪ್ರಕರಣವನ್ನು ಭೇದಿಸಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಗಿರಿನಗರ ಪೊಲೀಸ್ಠಾಣಾ ವ್ಯಾಪ್ತಿಯ ವಾಟರ್ ಟ್ಯಾಂಕ್ ರಸ್ತೆ, ಕತ್ರಿಗುಪ್ಪೆ, ಬನಶಂಕರಿ 3ನೇ ಹಂತದಲ್ಲಿ ಮನೆಯ ಮುಂಭಾಗ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿರುವ ಕುರಿತು ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪೊಲೀಸರು ಹಲವಾರು ಸಿ.ಸಿ ಟಿ.ವಿಗಳನ್ನು ಪರಿಶೀಲಿಸಿ ತನಿಖೆ ನಡೆಸಿದಾಗ ಆರೋಪಿಯು ಕುಮಾರಸ್ವಾಮಿ ಪೊಲೀಸ್ ಠಾಣೆಯ ಪ್ರಕರಣವೊಂದರಲ್ಲಿ ಕೇಂದ್ರ ಕಾರಾಗೃಹದಲ್ಲಿರುವ ಮಾಹಿತಿ ಮೇರೆಗೆ ಈತನನ್ನು ಬಾಡಿವಾರೆಂಟ್ ಮೇಲೆ ಪೊಲೀಸ್ ಅಭಿರಕ್ಷೆಗೆ ಪಡೆದುಕೊಂಡಿರುತ್ತಾರೆ.
ಆತನನ್ನು ವಿಚಾರಣೆಗೊಳಪಡಿಸಿದಾಗ, ದ್ವಿ-ಚಕ್ರ ವಾಹನ ಕಳವು ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾನೆ. ಆತನು ನೀಡಿದ ಮಾಹಿತಿ ಮೇರೆಗೆ ಹೊಸಕೆರೆ ಕ್ರಾಸ್ ಹತ್ತಿರ ಮೋರಿಯ ಬಳಿ 2 ದ್ವಿ-ಚಕ್ರ ವಾಹನ, ಹಾಗೂ ಚಾಮುಂಡಿನಗರ ಕ್ವಾಟ್ರಸ್ ಹಿಂಭಾಗದ ರಾಜ ಕಾಲುವೆ ಬಳಿ 2 ದ್ವಿ-ಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದು, ಇವುಗಳ ಮೌಲ್ಯ 4.10 ಲಕ್ಷ ರೂ.ಗಳಾಗಿದೆ.
ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತದೆ.
ಆರೋಪಿಯ ಬಂಧನದಿಂದ ಆಡುಗೋಡಿ ಪೊಲೀಸ್ ಠಾಣೆಯಲ್ಲಿ 1 ವಾಹನ ಕಳವು ಪ್ರಕರಣ, ಗಿರಿನಗರ ಪೊಲೀಸ್ಠಾಣೆಯಲ್ಲಿ 3 ವಾಹನ ಕಳವು ಪ್ರಕರಣಗಳು ಪತ್ತೆಯಾಗಿರುತ್ತವೆ. ಹಾಗೂ ಆತನ ವಿರುದ್ಧ ಬೆಂಗಳೂರು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಮತ್ತು ಹಾಸನ ಮೈಸೂರು ನಗರದ ಕಡೆಗಳಲ್ಲಿ ಕಳವು, ರಾಬರಿ ಮತ್ತು ಕೊಲೆ ಯತ್ನದ ಕೃತ್ಯಗಳಿಗೆ ಸಂಬಂಧಿಸಿದಂತೆ ಸುಮಾರು ಒಟ್ಟು 15 ಪ್ರಕರಣಗಳು ದಾಖಲಾಗಿರುತ್ತವೆ.
ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಲೋಕೇಶ್ ಭರಮಪ್ಪ ಜಗಳಾಸರ್ ಹಾಗೂ ವಿ.ವಿ.ಪುರಂ ಉಪ-ವಿಭಾಗದ ಸಹಾಯಕ ಪೊಲೀಸ್ಆಯುಕ್ತರಾದ ಶಾಮಿದ್ ಬಾಷರವರ ಮಾರ್ಗದರ್ಶನದಲ್ಲಿ ಗಿರಿನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಸತೀಶ್ ಕುಮಾರ್.ಯು ಮತ್ತು ಅಧಿಕಾರಿ/ಸಿಬ್ಬಂದಿಗಳ ತಂಡ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.