ಮನೆ ದೇಶ ಟೈಲರ್‌ ಕನ್ಹಯ್ಯಾ ಹತ್ಯೆ ಪ್ರಕರಣ: ಎನ್‌ಐಎನಿಂದ 8ನೇ ಆರೋಪಿ ಬಂಧನ

ಟೈಲರ್‌ ಕನ್ಹಯ್ಯಾ ಹತ್ಯೆ ಪ್ರಕರಣ: ಎನ್‌ಐಎನಿಂದ 8ನೇ ಆರೋಪಿ ಬಂಧನ

0

ಜೈಪುರ (Jaipur): ಉದಯ್ ಪುರದ ಟೈಲರ್ ಕನ್ಹಯ್ಯಾಲಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 7 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಇದೀಗ ಪ್ರಕರಣದ 8ನೇ ಆರೋಪಿಯನ್ನು ಬಂಧಿಸಲಾಗಿದೆ. ಮೊಹಮ್ಮದ್ ಜಾವೇದ್ (19) ಬಂಧಿತ ಆರೋಪಿ.

19 ವರ್ಷದ ಮೊಹಮ್ಮದ್ ಜಾವೇದ್ ಕನ್ಹಯ್ಯಾ ಲಾಲ್ ಹತ್ಯೆಯ ಸಂಚಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಂದು ತನಿಖಾ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದ್ದು, ಅವರು ಕನ್ಹಯ್ಯಾ ಅಂಗಡಿಯಲ್ಲಿ ಇರುವ ಬಗ್ಗೆ ಮಾಹಿತಿಯನ್ನು ಕೊಲೆಗಾರ ರಿಯಾಜ್ ಅಟ್ಟಾರಿಗೆ ಈತನೇ ರವಾನಿಸಿದ್ದ ಎನ್ನಲಾಗಿದೆ. 

ಕನ್ಹಯ್ಯಾ ಲಾಲ್ ಹತ್ಯೆಗೆ ಸಂಬಂಧಿಸಿದಂತೆ ತನಿಖಾ ಸಂಸ್ಥೆ ಜುಲೈ 9 ರಂದು ಎನ್ಐಎ ಏಳನೇ ಬಂಧನವನ್ನು ಮಾಡಿತ್ತು. ಬಂಧಿತನನ್ನು ಫರ್ಹಾದ್ ಮೊಹಮ್ಮದ್ ಶೇಖ್ ಪ್ರಮುಖ ಆರೋಪಿ ರಿಯಾಜ್ ಅತ್ತಾರಿಯ ನಿಕಟ ಸಹಚರ ಎಂದು ಹೇಳಲಾಗಿದೆ ಮತ್ತು ಈತ ಟೈಲರ್ ಹತ್ಯೆ ಮಾಡುವ ಸಂಚಿನಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದನು.

ಈತನೂ ಸೇರಿದಂತೆ  ಹಂತಕರಾದ ರಿಯಾಜ್ ಅತ್ತಾರಿ ಮತ್ತು ಗೌಸ್ ಮೊಹಮ್ಮದ್ ಅವರನ್ನು ನ್ಯಾಯಾಲಯ ಆಗಸ್ಟ್ 1 ರವರೆಗೆ NIA ಕಸ್ಟಡಿಗೆ ಕಳುಹಿಸಿತ್ತು. ಇತರ ನಾಲ್ವರು ಆರೋಪಿಗಳಾದ ಮೊಹ್ಸಿನ್, ಆಸಿಫ್, ಮೊಹಮ್ಮದ್ ಮೊಹ್ಸಿನ್ ಮತ್ತು ವಾಸಿಂ ಅಲಿ ಈಗಾಗಲೇ ಆಗಸ್ಟ್ 1 ರವರೆಗೆ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಬಿಜೆಪಿ ನಾಯಕಿ ನೂಪುರ್ ಶರ್ಮಾರನ್ನು ಬೆಂಬಲಿಸಿ ಪೋಸ್ಟ್ ಹಾಕಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಉದಯ್ ಪುರದ ಟೈಲರ್ ಕನ್ಹಯ್ಯಾಲಾಲ್ ರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು.