ನವದೆಹಲಿ : ದೇಶದ ಸಾಂಸ್ಕೃತಿಕ ಮತ್ತು ದೇಶಭಕ್ತಿಯ ಸಂಕೇತವಾದ ‘ವಂದೇ ಮಾತರಂ’ ಗೀತೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯವು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ರಾಷ್ಟ್ರಗೀತೆಗೂ ಮುನ್ನ ʻವಂದೇ ಮಾತರಂʼ ಗೀತೆಯನ್ನು ಹಾಡಬೇಕು ಅಥವಾ ನುಡಿಸಬೇಕು ಎಂದು ಕೇಂದ್ರ ಗೃಹ ಸಚಿವಾಲಯ ಹೊರಡಿಸಿದ ಹೊಸ ಮಾರ್ಗಸೂಚಿಯಲ್ಲಿ ತಿಳಿಸಿದೆ.
ವಂದೇ ಮಾತರಂ ಗೀತೆಗೆ 150 ವರ್ಷ ತುಂಬಿದರ ಪ್ರಯುಕ್ತ ಗೌರವ ಸಲ್ಲಿಸಲು ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಪದ್ಮ ಪ್ರಶಸ್ತಿಗಳಂತೆ ನಾಗರಿಕ ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ, ರಾಷ್ಟ್ರಪತಿಗಳು ಭಾಗವಹಿಸುವ ಇತರ ಎಲ್ಲಾ ಕಾರ್ಯಕ್ರಮಗಳು, ಅಧಿಕೃತ ಸರ್ಕಾರಿ ಕಾರ್ಯಕ್ರಮಗಳು, ಚಿತ್ರಮಂದಿರಗಳಲ್ಲಿ ವಂದೇ ಮಾತರಂ ಗೀತೆ ನುಡಿಸಬೇಕು ಅಥವಾ ಹಾಡಬೇಕು. 3 ನಿಮಿಷ 10 ಸೆಕೆಂಡುಗಳ ಅವಧಿಯ ವಂದೇ ಮಾತರಂ ಗೀತೆಯ 6 ಚರಣಗಳ ಗೀತೆ ನುಡಿಸುವಾಗ ಅಥವಾ ಹಾಡುವಾಗ ಎಲ್ಲರೂ ಕಡ್ಡಾಯವಾಗಿ ಎದ್ದು ನಿಲ್ಲಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಿದೆ.
ಇದರಲ್ಲಿ ತ್ರಿವರ್ಣ ಧ್ವಜ ಹಾರಿಸುವಾಗ, ಸರ್ಕಾರಿ ಕಾರ್ಯಕ್ರಮಗಳಿಗೆ ರಾಷ್ಟ್ರಪತಿಗಳ ಆಗಮನದ ಸಮಯದಲ್ಲಿ, ಅವರ ಭಾಷಣಗಳು ಮತ್ತು ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡುವ ಮೊದಲು ಮತ್ತು ನಂತರ, ಹಾಗೆಯೇ ರಾಜ್ಯಪಾಲರ ಆಗಮನ ಮತ್ತು ಭಾಷಣಗಳ ಮೊದಲು ಮತ್ತು ನಂತರವೂ ಸೇರಿದೆ. ಅಲ್ಲದೇ, ʻರಾಷ್ಟ್ರದ ಗೌರವಕ್ಕೆ ಅಪಮಾನ ತಡೆʼ ಕಾಯ್ದೆ ಅಡಿಯಲ್ಲಿ ರಾಷ್ಟ್ರಗೀತೆಗೆ (ಮತ್ತು ಈಗ ರಾಷ್ಟ್ರೀಯ ಗೀತೆ) ಅಡ್ಡಿಪಡಿಸುವ ಅಥವಾ ಇತರರು ಗೌರವಿಸುವುದನ್ನ ತಡೆಯುವ ಯಾವುದೇ ವ್ಯಕ್ತಿಗೆ ಗರಿಷ್ಠ 3 ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದಾಗಿದೆ.
6 ಚರಣಗಳಿರುವ ‘ವಂದೇ ಮಾತರಂ’ ಗೀತೆಯನ್ನು ಹಾಡುವುದು ಕಡ್ಡಾಯ ಈ ನಿರ್ದೇಶನವನ್ನ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು, ಸಚಿವಾಲಯಗಳು ಮತ್ತು ಸಾಂವಿಧಾನಿಕ ಸಂಸ್ಥೆಗಳಿಗೆ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ನೀಡಲಾಗಿದೆ. ಇಲ್ಲಿಯವರೆಗೆ, ವಂದೇ ಮಾತರಂ ಹಾಡಲು ಯಾವುದೇ ಅಧಿಕೃತ ಶಿಷ್ಟಾಚಾರವಿರಲಿಲ್ಲ. ಆದರೆ ಜನ ಗಣ ಮನ ಗೀತೆಯು ರಾಗ, ಸಮಯ ಮತ್ತು ಗಾಯನದ ಬಗ್ಗೆ ಸ್ಪಷ್ಟ ನಿಯಮಗಳನ್ನು ಹೊಂದಿತ್ತು.
ಹಾಡಿನ ವಿಸ್ತೃತ, ಆರು-ಚರಣಗಳ ಆವೃತ್ತಿಯನ್ನು ಇಲ್ಲಿಯವರೆಗೆ ಅಧಿಕೃತ ಕಾರ್ಯಕ್ರಮಗಳಲ್ಲಿ ಹಾಡಿರಲಿಲ್ಲ, ಆದರೆ ಈಗ ಅದನ್ನು ಕಡ್ಡಾಯಗೊಳಿಸಲಾಗಿದೆ. ವಿಶೇಷವೆಂದರೆ, 1937 ರಲ್ಲಿ ಕಾಂಗ್ರೆಸ್ ಸರ್ಕಾರ ತೆಗೆದುಹಾಕಿದ್ದ 4 ಚರಣಗಳನ್ನು ಒಳಗೊಂಡಂತೆ ಎಲ್ಲಾ 6 ಚರಣಗಳನ್ನೂ ನುಡಿಸಲಾಗುತ್ತದೆ. 1875 ರಲ್ಲಿ ಅಕ್ಷಯ ನವಮಿಗಾಗಿ ಬಂಕಿಮ್ ಚಂದ್ರ ಚಟರ್ಜಿ ಅವರು ವಂದೇ ಮಾತರಂ ಅನ್ನು ರಚಿಸಿದರು, ಅದು ಆ ವರ್ಷ ನವೆಂಬರ್ 7 ರಂದು ಬಂದಿತು.














