ಮನೆ ರಾಷ್ಟ್ರೀಯ ತಮಿಳುನಾಡಿನಲ್ಲಿ ವರುಣಾರ್ಭಟ: 10 ಬಲಿ- ಜನಜೀವನ ಅಸ್ತವ್ಯಸ್ತ

ತಮಿಳುನಾಡಿನಲ್ಲಿ ವರುಣಾರ್ಭಟ: 10 ಬಲಿ- ಜನಜೀವನ ಅಸ್ತವ್ಯಸ್ತ

0

ಚೆನ್ನೈ: ಕಳೆದ ಎರಡು ದಿನಗಳಲ್ಲಿ ತಮಿಳುನಾಡಿನ ದಕ್ಷಿಣ ಜಿಲ್ಲೆಗಳ ಹಲವು ಭಾಗಗಳಲ್ಲಿ ವರುಣನ ಅಬ್ಬರಕ್ಕೆ 10 ಮಂದಿ ಜೀವ ಕಳೆದುಕೊಂಡಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿದೆ.

ಎರಡು ದಿನಗಳಿಂದ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದ ಪರಿಣಾಮ ತಿರುನಲ್ವೇಲಿ ಮತ್ತು ಟುಟಿಕೋರಿನ್ ಜಿಲ್ಲೆಗಳಲ್ಲಿ 10 ಜನರು ಸಾವನ್ನಪ್ಪಿದ್ದು. ಕೆಲವರು ಗೋಡೆ ಕುಸಿತದಿಂದ ಪ್ರಾಣ ಕಳೆದುಕೊಂಡರೆ, ಇನ್ನೂ ಕೆಲವರು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದಾರೆ ಎಂದು ತಮಿಳುನಾಡು ಮುಖ್ಯ ಕಾರ್ಯದರ್ಶಿ ಶಿವ ದಾಸ್ ಮೀನಾ ತಿಳಿಸಿದ್ದಾರೆ.

ದಕ್ಷಿಣ ಜಿಲ್ಲೆಗಳು, ವಿಶೇಷವಾಗಿ ತಿರುನಲ್ವೇಲಿ ಮತ್ತು ಟುಟಿಕೋರಿನ್ ದಾಖಲೆಯ ಮಳೆ ಮತ್ತು ಪ್ರವಾಹಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಇದೇ ವೇಳೆ ತಿರುನಲ್ವೇಲಿ ಜಿಲ್ಲಾಧಿಕಾರಿ ಕೆ.ಪಿ.ಕಾರ್ತಿಕೇಯನ್ ಅವರು ಜಿಲ್ಲೆಯ ಪ್ರವಾಹ ಪರಿಸ್ಥಿತಿಯ ಕುರಿತು ವಿವರ ನೀಡಿದ್ದು, ಒಟ್ಟು ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಭಾರೀ ಮಳೆಯ ಹಿನ್ನೆಲೆಯಲ್ಲಿ ತಿರುನಲ್ವೇಲಿ ಮತ್ತು ತೆಂಕಶಿ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಅದೇ ರೀತಿ ತುತ್ತುಕುಡಿ ಜಿಲ್ಲೆಗೂ ಸಾರ್ವತ್ರಿಕ ರಜೆ ಘೋಷಿಸಲಾಗಿದೆ. ಭಾರೀ ಮಳೆಯಿಂದಾಗಿ ರೈಲು ಸಂಚಾರಕ್ಕೆ ತೊಂದರೆಯಾಗಿದೆ ಎಂದು ಹೇಳಿದ್ದಾರೆ.

ಪ್ರವಾಹದಲ್ಲಿ ಸಿಲುಕಿದ್ದವರನ್ನು ರಕ್ಷಣೆ ಮಾಡಲು ಭಾರತೀಯ ಸೇನೆಯ ರಕ್ಷಣಾ ತಂಡ ಶ್ರೀವೈಕುಂಟಂ ತಲುಪಿದ್ದು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ ಎಂದಿದ್ದಾರೆ.

ಹಣಕಾಸಿನ ನೆರವು ನೀಡುವಂತೆ ಪ್ರಧಾನಿಗೆ ಸ್ಟ್ಯಾಲಿನ್ ಮನವಿ

ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಮಂಗಳವಾರ ರಾಜ್ಯದ ದಕ್ಷಿಣ ಜಿಲ್ಲೆಗಳಲ್ಲಿ ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ಹೆಚ್ಚಿನ ಹಣಕಾಸಿನ ನೆರವು ನೀಡುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದ್ದಾರೆ.

ಈ ಕುರಿತು ಹೇಳಿಕೆ ನೀಡಿದ ಮುಖ್ಯಮಂತ್ರಿ ಪ್ರವಾಹದ ಪರಿಹಾರಕ್ಕಾಗಿ ಪ್ರಧಾನಿ ಬಳಿ “ತಕ್ಷಣದ ಪರಿಹಾರಕ್ಕಾಗಿ 7,300 ಕೋಟಿ ಮತ್ತು ಶಾಶ್ವತ ಪರಿಹಾರಕ್ಕಾಗಿ 12,000 ಕೋಟಿ ಪರಿಹಾರ ನೀಡುವಂತೆ ಕೇಳಿದ್ದೇನೆ. ಈಗಾಗಲೇ ನಾವು ಪ್ರವಾಹ ಸಂತ್ರಸ್ತರಿಗೆ 6000 ರೂ.ಗಳನ್ನು ಘೋಷಿಸಿದ್ದೇವೆ. ಅದನ್ನು ವಿತರಿಸಲಾಗುತ್ತಿದೆ. ಕೇಂದ್ರದಿಂದ ಪೂರ್ಣ ಪ್ರಮಾಣದ ಪರಿಹಾರ ಮೊತ್ತ ಸಿಕ್ಕ ಬಳಿಕ ಮೂಲ ಸೌಕರ್ಯಗಳನ್ನು ಒದಗಿಸಲು ಸಾಧ್ಯವಾಗಲಿದೆ ಎಂದು ಹೇಳಿದ್ದಾರೆ.

ಹಿಂದಿನ ಲೇಖನಅಕ್ರಮ ಸಂಬಂಧ: ಮಗುವನ್ನು ನದಿಗೆ ಎಸೆದು ಕೊಂದ ತಾಯಿ
ಮುಂದಿನ ಲೇಖನತುಮಕೂರಿನಲ್ಲಿ ಹೆಚ್ಚಾದ ಮೀಟರ್ ಬಡ್ಡಿ ದಂಧೆ: ಸಾಲಗಾರರ ಕಿರುಕುಳ ತಾಳಲಾರದೇ ಮಹಿಳೆ ಆತ್ಮಹತ್ಯೆಗೆ ಯತ್ನ