ಮನೆ ರಾಷ್ಟ್ರೀಯ ₹100 ಕೋಟಿ ಪರಿಹಾರ: ಭಜರಂಗದಳ ಅವಮಾನಿಸಿದ್ದಕ್ಕೆ ಖರ್ಗೆಗೆ ವಿಎಚ್‌ಪಿ ನೋಟಿಸ್‌

₹100 ಕೋಟಿ ಪರಿಹಾರ: ಭಜರಂಗದಳ ಅವಮಾನಿಸಿದ್ದಕ್ಕೆ ಖರ್ಗೆಗೆ ವಿಎಚ್‌ಪಿ ನೋಟಿಸ್‌

0

 ಕರ್ನಾಟಕ ವಿಧಾನಸಭೆ ಚುನಾವಣೆಯ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಭಜರಂಗದಳ ನಿಷೇಧ ಪ್ರಸ್ತಾಪವು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಮತ್ತೊಂದು ಸಂಕಷ್ಟ ತಂದೊಡ್ಡಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ನಮ್ಮ ಕಕ್ಷಿದಾರರ (ಭಜರಂಗದಳ) ವಿರುದ್ಧ ನೀವು ನೀಡಿರುವ ಮಾನಹಾನಿಕರ ಹೇಳಿಕೆಯು ವರ್ಚಸ್ಸು ಮತ್ತು ಗೌರವಕ್ಕೆ ತೀವ್ರ ಹಾನಿ ಉಂಟುಮಾಡಿದೆ. ಅದಕ್ಕಾಗಿ 14 ದಿನಗಳ ಒಳಗೆ 100.10 ಕೋಟಿ ರೂ ಪರಿಹಾರ ನೀಡಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ವಿಎಚ್‌ಪಿ ನೋಟಿಸ್ ಜಾರಿ ಮಾಡಿದೆ.

Join Our Whatsapp Group

ತನ್ನ ಯುವ ಘಟಕವಾದ ಭಜರಂಗದಳಕ್ಕೆ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಅಪಮಾನ ಮಾಡಲಾಗಿದೆ ಎಂದು ‘ವಿಎಚ್‌ಪಿ’ ಆರೋಪಿಸಿದೆ. ವಿಶ್ವ ಹಿಂದೂ ಪರಿಷತ್‌ನ ಚಂಡೀಗಡ ಘಟಕ ಮತ್ತು ಅದರ ಯುವ ಘಟಕ ಭಜರಂಗದಳ ಮೇ 4ರಂದು ನೋಟಿಸ್ ಜಾರಿ ಮಾಡಿದ್ದು, 14 ದಿನಗಳ ಒಳಗೆ 100.10 ಕೋಟಿ ರೂ ಪರಿಹಾರ ನೀಡುವಂತೆ ಒತ್ತಾಯಿಸಿದೆ. ಜಾತಿ ಮತ್ತು ಧರ್ಮದ ಆಧಾರದ ಮೇಲೆ ಸಮಾಜದಲ್ಲಿ ದ್ವೇಷ ಹರಡುತ್ತಿರುವ ಆರೋಪ ಎದುರಿಸುತ್ತಿರುವ ಭಜರಂಗದಳ, ಪಿಎಫ್‌ಐ ಮುಂತಾದ ಸಂಘಟನೆಗಳನ್ನು ನಿಷೇಧಿಸುವುದಾಗಿ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಹೇಳಿದೆ. ಆದರೆ, ಭಜರಂಗದಳವನ್ನು ‘ಪಿಎಫ್‌’ಐ, ‘ಸಿಮಿ’ ಮುಂತಾದ ನಿಷೇಧಿತ ಸಂಘಟನೆಗಳ ಜತೆ ಹೋಲಿಸಿರುವುದು ಮಾನಹಾನಿಕರ ಎಂದು ವಿಎಚ್‌ಪಿ ಪರ ವಕೀಲರು ನೋಟಿಸ್‌ನಲ್ಲಿ ದೂರಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಮೇ 10ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ, ಜಾತಿ ಮತ್ತು ಧರ್ಮದ ಆಧಾರದಲ್ಲಿ ಸಮುದಾಯಗಳ ನಡುವೆ ದ್ವೇಷ ಹರಡುತ್ತಿರುವ ಭಜರಂಗದಳ ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ನಂತಹ ಸಂಘಟನೆಗಳನ್ನು ಮತ್ತು ವ್ಯಕ್ತಿಗಳನ್ನು ನಿಷೇಧದಂತಹ ನಿರ್ಣಾಯಕ ಮತ್ತು ದೃಢ ಕ್ರಮ ಕೈಗೊಳ್ಳಲು ಬದ್ಧವಾಗಿರುವುದಾಗಿ ಹೇಳಿದೆ.

ಉಗ್ರ ಸಂಘಟನೆಗಳ ಜತೆ ದೇಶಭಕ್ತಿ ಸಂಘಟನೆ ಹೋಲಿಕೆ:

“ಭಾರತ ಸರ್ಕಾರವು ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆ ಅಡಿ ನಿಷೇಧಿಸಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾದಂತಹ (ಸಿಮಿ) ಉಗ್ರ ಸಂಘಟನೆಗಳ ಜತೆ ಹೋಲಿಸುವ ಮೂಲಕ ಹಾಗೂ ಅದನ್ನು ನಿಷೇಧಿಸಲಾಗುವುದು ಎಂದು ಘೋಷಿಸುವ ಮೂಲಕ, ಪ್ರಣಾಳಿಕೆಯ ಪುಟ 10ರಲ್ಲಿ ವಿಶ್ವ ಹಿಂದೂ ಪರಿಷತ್‌ನ ಅಂಗ ಸಂಸ್ಥೆಯಾದ ಭಜರಂಗದಳ ದ ಬಗ್ಗೆ ನೀವು ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದೀರಿ” ಎಂದು ವಿಎಚ್‌ಪಿ ಪರ ವಕೀಲ ಮತ್ತು ಅದರ ಕಾನೂನು ಘಟಕದ ಸಹ ಮುಖ್ಯಸ್ಥ ಸಾಹಿಲ್ ಬನ್ಸಾಲ್ ಅವರು ಖರ್ಗೆ ಅವರಿಗೆ ನೀಡಿರುವ ಲೀಗಲ್ ನೋಟಿಸ್‌ನಲ್ಲಿ ಹೇಳಿದ್ದಾರೆ.

“ಪಿಎಫ್‌ಐ ಮತ್ತು ಸಿಮಿ ಸಂಘಟನೆಗಳು, ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಮತ್ತು ನೂರಕ್ಕೂ ಹೆಚ್ಚು ದೇಶಗಳಿಂದ ಮತ್ತು ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆ ಅಡಿ ನಿಷೇಧಿಸಲಾಗಿರುವ ಅಲ್‌ ಕೈದಾ ಹಾಗೂ ಐಸಿಸ್ ಮತ್ತು ಇತರೆ ಜಾಗತಿಕ ಭಯೋತ್ಪಾದನಾ ಸಂಘಟನೆಗಳ ಜತೆ ನಂಟು ಹೊಂದಿವೆ” ಎಂದು ಅವರು ತಿಳಿಸಿದ್ದಾರೆ. ” ಭಜರಂಗದಳವು ಸರ್ವ ಮೋಕ್ಷ, ಸಹಿಷ್ಣುತೆ, ಧಾರ್ಮಿಕ ಏಕತೆ, ರಾಷ್ಟ್ರೀಯ ಸಮಗ್ರತೆ ಮತ್ತು ಭಾರತ ಮಾತೆಯ ಸೇವೆಯಲ್ಲಿ ನಂಬಿಕೆ ಹೊಂದಿದೆ. ಧರ್ಮ ಹಾಗೂ ಸೇವೆಯ ಆದರ್ಶಪ್ರಾಯ ಮೂರ್ತಿಗಳಾಗಿರುವ ಪೂಜನೀಯ ಉದಾಹರಣೆಯಾದ ಶ್ರೀರಾಮ ಮತ್ತು ಹನುಮಂತನಿಂದ ಪ್ರೇರಣೆ ಪಡೆದು ಈ ಕಾರ್ಯಗಳನ್ನು ನಡೆಸುತ್ತಿದೆ” ಎಂದು ಹೇಳಿದ್ದಾರೆ.