ಮನೆ ಅಪರಾಧ ವಿಜಯಪುರ: ಚುಡಾಯಿಸಿದ್ದಕ್ಕೆ ಮನನೊಂದ ಬಾಲಕಿ ನೇಣಿಗೆ ಶರಣು

ವಿಜಯಪುರ: ಚುಡಾಯಿಸಿದ್ದಕ್ಕೆ ಮನನೊಂದ ಬಾಲಕಿ ನೇಣಿಗೆ ಶರಣು

0

ವಿಜಯಪುರ: ಯುವಕ ಚುಡಾಯಿಸಿದ್ದಕ್ಕೆ ಮನನೊಂದ ಬಾಲಕಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುದ್ದೇಬಿಹಾಳ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Join Our Whatsapp Group

ಕಳೆದ ಹಲವು ದಿನಗಳಿಂದ ಸಂಗಮೇಶ ಜುಂಜವಾರ ಎಂಬ ಯುವಕ ಅಪ್ರಾಪ್ತೆಯ ಹಿಂದೆ ಬಿದ್ದಿದ್ದನು. ಕಾಲೇಜಿಗೆ ತೆರಳುತ್ತಿದ್ದ ವೇಳೆ ಹಿಂಬಾಲಿಸಿ ಚುಡಾಯಿಸುತ್ತಿದ್ದನು. ಪ್ರೀತಿ ಪ್ರೇಮದ ಹೆಸರಿನಲ್ಲಿ ಬಾಲಕಿಗೆ ಕಿರುಕುಳ ನೀಡುತ್ತಿದ್ದನು ಎಂಬ ಆರೋಪ ಕೇಳಿಬಂದಿದೆ.

ಅಲ್ಲದೇ, ಇತ್ತೀಚೆಗೆ ಬಾಲಕಿ ಕಾಲೇಜಿಗೆ ಹೋಗುವಾಗ ಮೈ-ಕೈ ಮುಟ್ಟಿ ಮಾತನಾಡಿಸಿದ್ದನು. ನಿನ್ನ ಪ್ರೀತಿಸುವೆ, ನೀನು ನನ್ನ ಪ್ರೀತಿಸು ಎಂದು ಬಲವಂತ ಮಾಡಿದ್ದನು. ಇದನ್ನು ಪ್ರಶ್ನೆ ಮಾಡಿದ್ದ ಬಾಲಕಿಯ ಸಹೋದರಿಗೆ ಸಂಗಮೇಶ ಜೀವ ಬೆದರಿಕೆ ಹಾಕಿ ಹಲ್ಲೆ ಮಾಡಿದ್ದನು ಎಂಬ ಆರೋಪವಿದೆ. ಈ ಕುರಿತು ಬಾಲಕಿ ನವೆಂಬರ್ 27 ರಂದು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಸಂಗಮೇಶ ಜುಂಜವಾರ, ಮೌನೇಶ ಮಾದರ, ಚಿದಾನಂದ ಕಟ್ಟಿಮನಿ ವಿರುದ್ಧ ದೂರು ನೀಡಿದ್ದಳು.

ಬಾಲಕಿ ದೂರಿನ ಆಧಾರದ ಮೇಲೆ, ಮುದ್ದೇಬಿಹಾಳ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು. ಪ್ರಮುಖ ಆರೋಪಿಗಳಾದ ಸಂಗಮೇಶ ಜುಂಜವಾರ, ಮೌನೇಶ ಮಾದರನನ್ನು ಬಂಧಿಸಿದ್ದರು.

ಆದರೆ, ಇದೆಲ್ಲದ್ದರಿಂದ ನೊಂದ ಬಾಲಕಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಾವಿಗೆ ಶರಣಾಗಿದ್ದಕ್ಕೆ ಬಾಲಕಿ ಸಮಾಜದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಲಕಿ ಸಾವಿಗೆ ಸಂಗಮೇಶ ಕಿರುಕುಳವೇ ಕಾರಣವೆಂದು ಆರೋಪಿಸಿದ್ದಾರೆ.