ಹುಬ್ಬಳ್ಳಿ: ರಾಜ್ಯ ರಾಜಕಾರಣ ಹೊಲಸೆದ್ದು ಹೋಗಿದೆ. ಬಿಜೆಪಿಯವರು ಇಷ್ಟು ದಿನ ರಾಮನ ಹೆಸರಿನಲ್ಲಿ ವೋಟ್ ಕೇಳಿದ್ರು. ಇದೀಗ ಸಾಬರ ಹೆಸರಲ್ಲಿ ವೋಟ್ ಕೇಳುತ್ತಿದ್ದಾರೆ. ಅವರಿಗೆ ಎಷ್ಟು ಗತಿಗೇಡು ಬಂದಿದ ಎಂದು ಮಾಜಿ ಸಚಿವ ಸಿಎಂ ಇಬ್ರಾಹಿಂ ವಾಗ್ದಾಳಿ ನಡೆಸಿದರು.
ನಗರದಲ್ಲಿಂದು ಮಾತನಾಡಿದ ಅವರು, ಯತ್ನಾಳ್ ಹಿಂದೂ ಸಮಾವೇಶ ಅಂತಾರೆ. ವಿಜಯೇಂದ್ರ, ಯಡಿಯೂರಪ್ಪ ಹಿಂದೂ ಅಲ್ವಾ? ವಕ್ಫ್ ವಿಚಾರವಾಗಿ ನಾನು ರಾಜ್ಯ ಸರ್ಕಾರಕ್ಕೆ ಒಂದು ಪೇಪರ್ ಅಲ್ಲಿ ಜಾಹೀರಾತು ಕೊಡಲು ಹೇಳುತ್ತೇನೆ. ಯಾರ ಹೆಸರಲ್ಲಿ ಪಹಣಿ ಇದೆಯೋ, ಅವನೇ ಭೂ ಒಡೆಯ. ಇದಕ್ಕೆ ಯಾಕೆ ಚಳವಳಿ ಬೇಕು? ಇವರಿಗೆ ವಿಷಯ ಇಲ್ಲ, ಹೀಗಾಗಿ ಇದನ್ನು ಹಿಡಿದುಕೊಂಡು ಹೋಗುತ್ತಿದ್ದಾರೆ. ಹಿಂದುತ್ವದ ಮೇಲೆ ವೋಟ್ ಬರಲ್ಲ. ಹಾಗಾಗಿ ಹಿಂದುತ್ವ ಸಾಕಾಗಿ ಹೋಗಿದೆ ಎಂದರು.
ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಮೆಂಟಲ್ ಆಸ್ಪತ್ರೆಗೆ ಸೇರಿಸಬೇಕು. ಬಸವಣ್ಣನ ಬಗ್ಗೆ ಮಾತಾಡುತ್ತಾರೆ. ಎಲ್ಲಿ ಅವರೂ ಕೂಡಲಸಂಗಮ ನದಿಗೆ ಹಾರ್ತಾರೋ ಏನೋ ಎಂದು ಯತ್ನಾಳ್ ವಿರುದ್ಧ ವ್ಯಂಗ್ಯವಾಡಿದರು.
ಯತ್ನಾಳ್ ಮೊದಲು ಸಾಣೇಹಳ್ಳಿಗೆ ಹೋಗಿ ರಾಗಿ ಮುದ್ದೆ ತಿಂದು ಬಸವ ತತ್ವ ಕಲಿಯಲಿ. ವಕ್ಫ್ ಎಂದರೇನು? ವಕ್ಫ್ ಕಾಯ್ದೆ ಮಾಡಿದ್ದು ಕಾಂಗ್ರೆಸ್ ಅಲ್ಲ. ಅದನ್ನು ಮಾಡಿದ್ದು ಬ್ರಿಟಿಷರು. ಯಾವ ಆಸ್ತಿಯನ್ನು ವಕ್ಫ್ ಎಂದು ಹೇಳಲು ಆಗಲ್ಲ. ಅದಕ್ಕೆ ಅದರದೇ ಆದ ನಿಯಮ ಇದೆ. ಆ ಹುಚ್ಚ ಮಂತ್ರಿ ಅದಾಲತ್ ಮಾಡಿ, ರಸ್ತೆಯಲ್ಲಿರೋ ಕಸವನ್ನು ಮೈಮೇಲೆ ಹಾಕಿಕೊಂಡ ಎಂದು ಪರೋಕ್ಷವಾಗಿ ಜಮೀರ್ ಅಹಮ್ಮದ್ ಗೆ ಕುಟುಕಿದರು.
ವಕ್ಫ್ ಕಾಯ್ದೆಯ ವಿಚಾರದಲ್ಲಿ ಜಿಲ್ಲಾಧಿಕಾರಿಗೆ ಅಧಿಕಾರ ಕೊಡಬೇಕು ಅಂತಾರೆ. ಜಿಲ್ಲಾಧಿಕಾರಿಗೆ ಅಲ್ಲ, ಹೈಕೋರ್ಟ್ ನ್ಯಾಯಾಧೀಶರಿಗೆ ಅಧಿಕಾರ ಕೊಡಿ. ಹಿಂದೂ ಸಮಾವೇಶ ಯಾಕೆ, ಮಹಾದಾಯಿ ವಿಚಾರವಾಗಿ ಸಭೆ ಮಾಡಿ ಎಂದರು.
ಸಿದ್ದರಾಮಯ್ಯ ಅವರ ಸ್ವಾಭಿಮಾನದ ಸಮಾವೇಶದ ಬಗ್ಗೆ ನಾನು ಮಾತಾಡಲ್ಲ. ಸಿದ್ದರಾಮಯ್ಯ ಶಕ್ತಿ ಸಿದ್ದರಾಮಯ್ಯಗೆ ಇದೆ. ಡಿ.ಕೆ.ಶಿವಕುಮಾರ್ ಶಕ್ತಿ ಅವರಿಗೆ ಇದೆ. ಸಿಎಂ ಅವರನ್ನು ಇಳಿಸುವ ಪ್ರಯತ್ನದ ಬಗ್ಗೆ ಗೊತ್ತಿಲ್ಲ. ಬಸನಗೌಡ ಪಾಟೀಲ್ ಯತ್ನಾಳ್ ಫ್ರಸ್ಟ್ರೇಟ್ ಆಗಿದ್ದಾರೆ. ಹಾಗೆ ಆಗಬೇಡಿ. ಅವರೇ ಎಲ್ಲಿ ನದಿಗೆ ಹಾರ್ತಾರೋ ಎನ್ನುವ ಅನುಮಾನ ಇದೆ. ಹೀಗಾಗಿ ಬಸವ ತತ್ವ ಓದಿ ನಿಮಗೆ ಜ್ಞಾನೋದಯ ಆಗತ್ತದೆ. ಮೋಹನ್ ಭಾಗವತ್ ಮೊದಲು ಮದುವೆಯಾಗಲಿ ಎಂದು ಹೇಳಿದರು.