ಹುಬ್ಬಳ್ಳಿ: ಆರು ತಿಂಗಳ ನಂತರ ಅಂತೂ ಇಂತೂ ಬಿಜೆಪಿ ರಾಜ್ಯಾಧ್ಯಕ್ಷರ ಹುದ್ದೆಗೆ ನೇಮಕ ಮಾಡಿದ್ದಾರೆ. ಅತ್ತೂ ಕರೆದು ಔತಣ ಮಾಡಿಸಿಕೊಂಡಂತ ಸ್ಥಿತಿ ವಿಜಯೇಂದ್ರ ಅವರದ್ದು ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಏನೋ ಅತ್ತು ಕರೆದು ಮಾಡಿರೋ ತರಹ ಕಾಣುತ್ತೆ. ಒಂದು ರಾಜಕೀಯ ಪಕ್ಷವಾಗಿ ತಕ್ಷಣವೇ ರಾಜ್ಯಾಧ್ಯಕ್ಷರ ಆಯ್ಕೆ ಮಾಡಬೇಕಿತ್ತು. ಕಳೆದ ಆರು ತಿಂಗಳಿಂದ ಬಿಜೆಪಿ ನಾಯಕನ ಆಯ್ಕೆ ಮಾಡಿರಲಿಲ್ಲ. ಈಗ ಯಾಕೆ ಆಯ್ಕೆ ಮಾಡಿದ್ರು? ಇದನ್ನೆಲ್ಲಾ ನೋಡಿದ್ರೆ ಬಿಜೆಪಿ ಫೇಲ್ ಆಗಿದೆ. ಬಿಜೆಪಿಯವರು ಸಾಕಷ್ಟು ಭ್ರಮೆಯಲ್ಲಿದ್ದಾರೆ ಎಂದು ಶೆಟ್ಟರ್ ಹೇಳಿದ್ದಾರೆ.
ಲಿಂಗಾಯತ ನಾಯಕರಿಗೆ ಬಿಜೆಪಿ ಹೈಕಮಾಂಡ್ ಮಣೆ ಹಾಕಿರೋ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಜಗದೀಶ್ ಶೆಟ್ಟರ್ ಅವರು ಮುಂದಿನ ದಿನಗಳಲ್ಲಿ ಎಲ್ಲವೂ ಗೊತ್ತಾಗಲಿದೆ. ನಾನು ಕಾಂಗ್ರೆಸ್‌ನಲ್ಲಿ ಇದ್ದೀನಿ. ಅಧ್ಯಕ್ಷರ ಆಯ್ಕೆ ಅವರ ಪಕ್ಷಕ್ಕೆ ಬಿಟ್ಟ ವಿಚಾರ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 136 ಸ್ಥಾನ ಬಂದು ಬಲಾಢ್ಯವಾಗಿ ಬೆಳೆದಿದೆ ಎಂದರು.
ಈಗಾಗಲೇ ಬೇರೆ, ಬೇರೆ ರಾಜ್ಯದಲ್ಲಿ ಆಪರೇಷನ್ ಕಮಲ ಮಾಡಲು ಹೋಗಿ ಕೈ ಸುಟ್ಟುಕೊಂಡಿದ್ದಾರೆ. 50-60 ಶಾಸಕರನ್ನು ಕರೆದುಕೊಂಡು ಬಂದು ಮತ್ತೆ ಸರ್ಕಾರ ರಚನೆ ಮಾಡೋದು ಭ್ರಮೆ. ಈಗ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ. ಪಂಚ ರಾಜ್ಯದ ಚುನಾವಣೆ ಫಲಿತಾಂಶ ಕಾಂಗ್ರೆಸ್ ಪರವಾಗಿ ಇರುತ್ತೆ ಎಂದು ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.