ಬೆಂಗಳೂರು : ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತೆ ಮೇಲೆ ಪೊಲೀಸರು ಮಾಡಿರೋ ದೌರ್ಜನ್ಯ ಇಡೀ ರಾಜ್ಯವೇ ತಲೆ ತಗ್ಗಿಸೋ ಘಟನೆ ಅಂತ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಹುಬ್ಬಳ್ಳಿಯಲ್ಲಿ ಇಡೀ ರಾಜ್ಯವೇ ತಲೆ ತಗ್ಗಿಸೋ ಘಟನೆ ಆಗಿದೆ. ಬಿಜೆಪಿ ಕಾರ್ಯಕರ್ತೆ SIR ಮ್ಯಾಪಿಂಗ್ ಮಾಡೋ ಸಮಯದಲ್ಲಿ ಕಾಂಗ್ರೆಸ್ ಕಾರ್ಪೋರೇಟರ್ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿ ಕಾಂಗ್ರೆಸ್ ಅವರೇ ದೂರು ನೀಡಿದ್ದಾರೆ. ಪೊಲೀಸರು ಕಾಂಗ್ರೆಸ್ ಅವರ ದೂರಿನ ಹಿನ್ನೆಲೆ ಮಹಿಳೆ ಮೇಲೆ ದೌರ್ಜನ್ಯ ಮಾಡಿದ್ದಾರೆ.
ಬಿಜೆಪಿ ಕಾರ್ಯಕರ್ತೆ ಸುಜಾತ ದಲಿತ ಮಹಿಳೆ. ಅವರನ್ನ ವಿವಸ್ತ್ರಗೊಳಿಸಿದ್ದಾರೆ. ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿ ಆಗಿವೆ. ಕಾಂಗ್ರೆಸ್ ಏಜೆಂಟ್ ರೀತಿ ಪೊಲೀಸರು ಕೆಲಸ ಮಾಡ್ತಾ ಇದ್ದಾರೆ. ಈ ಘಟನೆ ಖಂಡಿಸುತ್ತೇನೆ. ಅಯೋಗ್ಯ ಅಧಿಕಾರಿಗಳನ್ನ ಗೃಹ ಸಚಿವರು ಕೂಡಲೇ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.
ಪೊಲೀಸರ ವಿರುದ್ದ ಕ್ರಮಕ್ಕೆ ನಾನು ಆಗ್ರಹ ಮಾಡ್ತೀನಿ. ಕಾಂಗ್ರೆಸ್ ಸರ್ಕಾರ 140 ಶಾಸಕರು ಇದ್ದಾರೆ ಅಂತ ಅಹಂಕಾರದಿಂದ ನಡೆದುಕೊಳ್ಳುತ್ತಿದ್ದಾರೆ. ಬಳ್ಳಾರಿ, ಹುಬ್ಬಳ್ಳಿ, ಬೀದರ್ ಹೀಗೆ ಅನೇಕ ಕಡೆ ಇಂತಹ ಘಟನೆ ಆಗ್ತಿವೆ. ಕಾಂಗ್ರೆಸ್ ಪಾಪದ ಕೊಡ ತುಂಬಿದೆ. ರಾಜ್ಯದ ಜನ ಇವರಿಗೆ ಶಾಪ ಹಾಕ್ತಿದ್ದಾರೆ. ಸಮಯ ಬಂದಾಗ ಜನರೇ ಉತ್ತರ ಕೊಡ್ತಾರೆ. ಸಿಎಂ ಅವರು ಈಗಲಾದ್ರು ಎಚ್ಚೆತ್ತುಕೊಳ್ಳಬೇಕು ಅಂತ ಒತ್ತಾಯ ಮಾಡಿದರು.
ಗೃಹ ಸಚಿವರಿಗೆ ವಿಷಯ ಗೊತ್ತಿದೆಯೋ ಇಲ್ಲವೋ ಗೊತ್ತಿಲ್ಲ. ಗೃಹ ಸಚಿವರು ಅಸಮರ್ಥರು ಅಂತ ಜನ ಮಾತಾಡ್ತಿದ್ದಾರೆ. ಅಂಬೇಡ್ಕರ್ ಅಂತ ಮಾತಾಡೋ ಸಿಎಂ, ಡಿಸಿಎಂ, ಕ್ರಮ ತೆಗೆದುಕೊಳ್ಳಬೇಕು. ತಕ್ಷಣವೇ ಸಿಎಂ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಮಹಿಳೆಯೇ ಬಟ್ಟೆ ಹರಿದುಕೊಂಡಿದ್ದಾರೆ ಎಂಬ ಮಹಿಳಾ ಆಯೋಗದ ಅಧ್ಯಕ್ಷೆ ಹೇಳಿಕೆ ವಿಚಾರಕ್ಕೆ, ಮಹಿಳಾ ಆಯೋಗದ ಅಧ್ಯಕ್ಷರು ಯಾವ ಪಕ್ಷ ಗೊತ್ತಿದೆ. ಅವರ ಬಗ್ಗೆ ಮಾತಾಡೊಲ್ಲ. ನಮ್ಮ ಕಾರ್ಯಕರ್ತೆ ಮೇಲೆ ಯಾಕೆ ಕಾಂಗ್ರೆಸ್ ಅವರು ಹಲ್ಲೆ ಮಾಡಿದ್ರು? ದಲಿತರ ಪರ ಮೊಸಳೆ ಕಣ್ಣೀರು ಕಾಂಗ್ರೆಸ್ ಹಾಕ್ತಾ ಇದೆ. ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಸಿದ್ದರಾಮಯ್ಯ ಅವರು ದೇವರಾಜ ಅರಸು ಅವರ ದಾಖಲೆ ಮುರಿದಿದ್ದೇನೆ ಅನ್ನೋ ಭ್ರಮೆಯಲ್ಲಿದ್ದಾರೆ. ಮೊದಲು ಸರಿಯಾದ ಆಡಳಿತ ಕೊಡಲಿ ಎಂದು ವಾಗ್ದಾಳಿ ನಡೆಸಿದರು.















