ಮನೆ ರಾಷ್ಟ್ರೀಯ ‘ವಿಐಪಿ ಸಂಪ್ರದಾಯ’ಕ್ಕೆ ಸಂಪೂರ್ಣ ಲಗಾಮು ಹಾಕಬೇಕಿದೆ: ರಾಹುಲ್ ಗಾಂಧಿ

‘ವಿಐಪಿ ಸಂಪ್ರದಾಯ’ಕ್ಕೆ ಸಂಪೂರ್ಣ ಲಗಾಮು ಹಾಕಬೇಕಿದೆ: ರಾಹುಲ್ ಗಾಂಧಿ

0

ನವದೆಹಲಿ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಸಾಗುತ್ತಿರುವ ಮಹಾಕುಂಭಮೇಳದಲ್ಲಿ ಇಂದು (ಬುಧವಾರ) ಮೌನಿ ಅಮಾವಾಸ್ಯೆಯಂದು ತ್ರಿವೇಣಿ ಸಂಗಮದಲ್ಲಿ ಸಂಭವಿಸಿರುವ ಕಾಲ್ತುಳಿತ ಅವಘಡದ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ಉತ್ತರ ಪ್ರದೇಶದ ಸರ್ಕಾರಗಳ ವಿರುದ್ಧ ವಿಪಕ್ಷಗಳ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದಾರೆ.

Join Our Whatsapp Group

‘ವಿಐಪಿ ಸಂಪ್ರದಾಯ’ಕ್ಕೆ ಸಂಪೂರ್ಣ ಲಗಾಮು ಹಾಕಬೇಕಿದ್ದು, ಭಕ್ತರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಸೂಕ್ತ ವ್ಯವಸ್ಥೆಗಳನ್ನು ಮಾಡಬೇಕಿದೆ’ ಎಂದು ಲೋಕಸಭೆ ವಿರೋಧ ಪಕ್ಷಗಳ ನಾಯಕ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮ ‘ಎಕ್ಸ್‌’ನಲ್ಲಿ ಬರೆದುಕೊಂಡಿರುವ ರಾಹುಲ್ ಗಾಂಧಿ, ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭಮೇಳದ ಕಾಲ್ತುಳಿತದಲ್ಲಿ ಹಲವರು ಮೃತಪಟ್ಟು ಅನೇಕರು ಗಾಯಗೊಂಡಿರುವ ಸುದ್ದಿ ಅತ್ಯಂತ ದುಃಖಕರವಾಗಿದೆ. ಮೃತರ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಗೊಂಡವರು ಶೀಘ್ರವೇ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

ಅಸಮರ್ಪಕ ವ್ಯವಸ್ಥೆ ಮತ್ತು ಸಾಮಾನ್ಯ ಭಕ್ತರ ಬದಲಿಗೆ ವಿಐಪಿ ಚಲನವಲನಕ್ಕೆ ವಿಶೇಷ ಆದ್ಯತೆ ನೀಡಿರುವುದು ಈ ದುರಂತಕ್ಕೆ ಕಾರಣವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಕುಂಭಮೇಳದಲ್ಲಿ ಮಹಾಸ್ನಾನ ಸೇರಿದಂತೆ ಅನೇಕ ಕಾರ್ಯಕ್ರಮಗಳು ನಡೆಯಲಿವೆ. ಈಗಲೂ ಕಾಲ ಮಿಂಚಿಲ್ಲ. ಸರ್ಕಾರವು ಇಂತಹ ಅಹಿತಕರ ಘಟನೆಗಳನ್ನು ತಡೆಯಲು ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕಿದೆ ಎಂದು ಅವರು ಮನವಿ ಮಾಡಿದ್ದಾರೆ.

ಸಂತ್ರಸ್ತರಿಗೆ ನೆರವಾಗುವಂತೆಯೂ ಕಾಂಗ್ರೆಸ್ ಕಾರ್ಯಕರ್ತರಿಗೆ ರಾಹುಲ್ ಕರೆ ನೀಡಿದ್ದಾರೆ.

ಕಾಂಗ್ರೆಸ್ ಸಂಸದೆ, ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಸಹ ಮೃತರ ಕುಟುಂಬಗಳಿಗೆ ಸಂತಾಪವನ್ನು ಸೂಚಿಸಿದ್ದು, ಗಾಯಾಳುಗಳು ಶೀಘ್ರವೇ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.

ಮಹಾಕುಂಭನಗರಕ್ಕೆ ಭೇಟಿ ನೀಡುವ ಭಕ್ತರು ಅವ್ಯವಸ್ಥೆಯ ಬಗ್ಗೆ ನಿರಂತರವಾಗಿ ದೂರು ನೀಡುತ್ತಿದ್ದರೂ ಸರ್ಕಾರವು ಯಾವುದೇ ಕ್ರಮ ಕೈಗೊಂಡಿಲ್ಲ, ನಿರ್ಲಕ್ಷ್ಯವನ್ನು ತೋರಿದೆ ಎಂದು ಅವರು ದೂರಿದ್ದಾರೆ.

ಗಾಯಾಳುಗಳನ್ನು ಏರ್ ಲಿಫ್ಟ್ ಮಾಡಿ ತಕ್ಷಣ ಚಿಕಿತ್ಸೆಗೆ ವ್ಯವಸ್ಥೆ ಮಾಡುವಂತೆಯೇ ಪ್ರಿಯಾಂಕಾ ಗಾಂಧಿ ಮನವಿ ಮಾಡಿದ್ದಾರೆ.

ಮಹಾಕುಂಭಮೇಳದ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಘಟನೆ ಅತ್ಯಂತ ದುಃಖಕರ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.

ಭಕ್ತರು ತಾಳ್ಮೆಯನ್ನು ಕಾಪಾಡಿಕೊಂಡು ಆಡಳಿತದ ಸೂಚನೆಯನ್ನು ಅನುಸರಿಸುವಂತೆ ಕೇಜ್ರಿವಾಲ್ ಮನವಿ ಮಾಡಿದ್ದಾರೆ.

ಘಟನೆಗೆ ಬಿಎಸ್‌ಪಿ ನಾಯಕಿ ಮಾಯಾವತಿ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸಹ ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ‘ಇಂತಹ ಘಟನೆಗಳಿಂದ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ. ಭಕ್ತರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕಿದೆ’ ಎಂದು ಮನವಿ ಮಾಡಿದ್ದಾರೆ.