ಮನೆ ರಾಜ್ಯ ‘ಜೆಡಿಎಸ್ ಗೆ ಮತ ಹಾಕಿದರೆ ಅದು ಕಾಂಗ್ರೆಸ್ಸಿಗೆ ಹಾಕಿದಂತೆಯೇ’: ಅಮಿತ್ ಶಾ

‘ಜೆಡಿಎಸ್ ಗೆ ಮತ ಹಾಕಿದರೆ ಅದು ಕಾಂಗ್ರೆಸ್ಸಿಗೆ ಹಾಕಿದಂತೆಯೇ’: ಅಮಿತ್ ಶಾ

0

ತೇರದಾಳ (ಬಾಗಲಕೋಟೆ): ಜೆಡಿಎಸ್ ಪಕ್ಷಕ್ಕೆ ಮತ ಹಾಕಿದರೆ ಅದು ಕಾಂಗ್ರೆಸ್ ಪಕ್ಷಕ್ಕೆ ಮತಹಾಕಿದಂತೆಯೇ ಸರಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅಭಿಪ್ರಾಯಪಟ್ಟರು

Join Our Whatsapp Group

ಬಾಗಲಕೋಟೆಯ ತೇರದಾಳದಲ್ಲಿ ನಡೆದ ಬಿಜೆಪಿಯ ಬೃಹತ್ ಸಮಾರಂಭದಲ್ಲಿ ಮಾತನಾಡಿದ ಅವರು, ನೀವು ಜೆಡಿಎಸ್ ಗೆ ಮತಹಾಕಿದಿರಿ ಎಂದಿಟ್ಟುಕೊಳ್ಳಿ. ಒಂದು ವೇಳೆ ಯಾವ ಪಕ್ಷಕ್ಕೂ ಬಹುಮತ ಬಾರದೇ ಇದ್ದರೆ ಜೆಡಿಎಸ್ ನವರು ಕಾಂಗ್ರೆಸ್ ಜೊತೆಗೆ ಕೈ ಜೋಡಿಸಿ ಸರ್ಕಾರ ರಚಿಸುತ್ತಾರೆ. ಹಾಗಾಗಿ, ಜೆಡಿಎಸ್ ಗೆ ಮತ ಹಾಕಿದರೆ ಅದು ಕಾಂಗ್ರೆಸ್ಸಿಗೆ ಹಾಕಿದಂತೆ. ಕಾಂಗ್ರೆಸ್ ಸರ್ಕಾರವು ರಿವರ್ಸ್ ಗೇರ್ ನಲ್ಲಿ ಹೋಗುವಂಥ ಪಕ್ಷವಾಗಿದ್ದು ಅದು ಸರ್ಕಾರ ನಡೆಸಿದರೆ ಅಭಿವೃದ್ಧಿಯೆಲ್ಲಾ ಹಿಂದಕ್ಕೆ ಹೋಗುತ್ತವೆ ಎಂದು ಹೇಳಿದರು.

ಈಗ ಕರ್ನಾಟಕದಲ್ಲಿ ರದ್ದುಗೊಳಿಸಲಾಗಿರುವ ಮುಸ್ಲಿಮರ ಮೀಸಲಾತಿಯನ್ನು ಕಾಂಗ್ರೆಸ್ ಪುನಃ ಅಧಿಕಾರಕ್ಕೆ ಬಂದರೆ ವಾಪಸ್ಸು ತರುವುದಾಗಿ ಹೇಳಿದೆ. ಆದರೆ, ಈಗ ಮುಸ್ಲಿಮರ ಮೀಸಲಾತಿ ರದ್ದತಿಯಿಂದ ಹೆಚ್ಚಾಗಿರುವ ಅನ್ಯ ಸಮುದಾಯಗಳ ಮೀಸಲಾತಿಯಲ್ಲಿ ಯಾವುದನ್ನು ಕಡಿಮೆ ಮಾಡಿ ನೀವು ಮುಸ್ಲಿಮರಿಗೆ ಪುನಃ ಮೀಸಲಾತಿ ನೀಡುತ್ತೀರಿ” ಎಂದು ಕೇಂದ್ರ ಸಚಿವ ಅಮಿತ್ ಶಾ ಅವರು, ಕಾಂಗ್ರೆಸ್ ಅಧ್ಯಕ್ಷ ಡಿಕೆಶಿ ಶಿವಕುಮಾರ್ ಅವರನ್ನು ಪ್ರಶ್ನಿಸಿದ್ದಾರೆ.

ಬಿಜೆಪಿಯು ಧರ್ಮಾಧಾರಿತ ಮೀಸಲಾತಿಯನ್ನು ಮೊದಲಿನಿಂದಲೂ ವಿರೋಧಿಸುತ್ತಾ ಬಂದಿದೆ. ಹಾಗಾಗಿ, ಕರ್ನಾಟಕದಲ್ಲಿ ಹಿಂದಿನ ಯಾವ ಸರ್ಕಾರಗಳೂ ಮಾಡಿರದಂಥ ಧೈರ್ಯವನ್ನು ಬೊಮ್ಮಾಯಿ ಸರ್ಕಾರ ಮಾಡಿದ್ದು, ಮುಸ್ಲಿಮರಿಗೆ ನೀಡಲಾಗಿದ್ದ ಶೇ. 4ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿ, ಅದನ್ನು ಲಿಂಗಾಯತ, ಒಕ್ಕಲಿಗರಿಗೆ ಸಮಾನವಾಗಿ ಹಂಚಿದೆ. ಅಲ್ಲದೆ, ಒಳಮೀಸಲಾತಿಯಿಂದಾಗಿ, ಎಸ್ಸಿ, ಎಸ್ಟಿ ಸಮುದಾಯಗಳ ಮೀಸಲಾತಿಯನ್ನು ಹೆಚ್ಚಿಸಲಾಗಿದೆ ಎಂದರು.

ಕಾಂಗ್ರೆಸ್ ಪಕ್ಷವು ಲಿಂಗಾಯತರನ್ನು ಮೊದಲಿನಿಂದಲೂ ಕೆಟ್ಟದಾಗಿ ನಡೆಸಿಕೊಂಡು ಬಂದಿದೆ. ಅವರು, ನಿಜಲಿಂಗಪ್ಪ ಹಾಗೂ ವೀರೇಂದ್ರ ಪಾಟೀಲ್ ಅವರಿಗೆ ಏನು ಮಾಡಿದರು, ಹೇಗೆ ಅವರನ್ನು ಅಧಿಕಾರದಿಂದ ಕೆಳಗಿಳಿಸಿದರು ಇತ್ಯಾದಿ ವಿಚಾರಗಳು ಎಲ್ಲರಿಗೂ ಗೊತ್ತಿದೆ. ಆದರೆ, ಬಿಜೆಪಿ ಹಾಗಲ್ಲ. ನಾವು ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡಿದ್ದೇವೆ. ಆನಂತರ ಲಕ್ಷ್ಮಣ ಸವದಿಯನ್ನು ಡಿಸಿಎಂ ಮಾಡಿದ್ದೆವು. ಆನಂತರ, ಜಗದೀಶ್ ಶೆಟ್ಟರ್, ಈಗ ಬೊಮ್ಮಾಯಿ ಅವರನ್ನೂ ಸಿಎಂ ಮಾಡಿದ್ದೇವೆ. ಈಗ ಹೇಳಿ, ಯಾರು ಲಿಂಗಾಯತ ಸಮುದಾಯಕ್ಕೆ ಸೂಕ್ತ ಸ್ಥಾನಮಾನ ಕೊಟ್ಟಿದ್ದರು ಎಂದು ಅವರು ಪ್ರಶ್ನಿಸಿದ್ದಾರೆ. ಆದರೆ, ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡಿದಾಗ ಇದೇ ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿ ಅವರ ಸರ್ಕಾರವನ್ನು ಪತನಗೊಳಿಸಿದರು. ಅದನ್ನು ಯಾರೂ ಮರೆಯುವಂತಿಲ್ಲ ಎಂದರು.