ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಬೆದರಿಕೆ ಬುದ್ಧಿ ಮುಂದುವರಿಸಿದ್ದಾರೆ. ಭಾರತದ ಮೇಲೆ ಬಾರಿ ಬಾರಿ ಹರಿಹಾಯ್ದಿರುವ ಟ್ರಂಪ್ ಈಗ ಚೀನಾ ಮೇಲೆ ಮತ್ತೆ ವಾಗ್ದಾಳಿ ನಡೆಸಿದ್ದಾರೆ.
ಚೀನಾವೇನಾದರೂ ತಮಗೆ ಮ್ಯಾಗ್ನೆಟ್ ನೀಡಲಿಲ್ಲವೆಂದರೆ ಪರಿಣಾಮ ನೆಟ್ಟಗಿರಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ‘ಅಮೆರಿಕಕ್ಕೆ ಚೀನಾ ವಿರಳ ಭೂ ಅಯಸ್ಕಾಂತಗಳನ್ನು ಒದಗಿಸಬೇಕು. ಇಲ್ಲದಿದ್ದರೆ ಟ್ಯಾರಿಫ್ ಅನ್ನು ಶೇ. 200ಕ್ಕೆ ಏರಿಸುತ್ತೇವೆ’ ಎಂದು ನೇರವಾಗಿ ಬೆದರಿಕೆ ಹಾಕಿದ್ದಾರೆ.
‘ಅವರು ನಮಗೆ ಮ್ಯಾಗ್ನೆಟ್ ನೀಡಬೇಕು. ಒಂದು ವೇಳೆ ನೀಡದೇ ಹೋದರೆ ಅವರಿಗೆ ಶೇ. 200 ಟ್ಯಾರಿಫ್ ಹಾಕುತ್ತೇವೆ. ಅದರಲ್ಲಿ ನಮಗೇನೂ ಸಮಸ್ಯೆ ಇಲ್ಲ’ ಎಂದು ಅಮೆರಿಕ ಅಧ್ಯಕ್ಷರು ತಿಳಿಸಿದ್ದಾರೆ. ವಿರಳ ಭೂ ಖನಿಜಗಳು ಇವತ್ತು ಎಲೆಕ್ಟ್ರಿಕ್ ವಾಹನಗಳು ಇತ್ಯಾದಿ ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರಿಕ್ ಉದ್ಯಮಕ್ಕೆ ಅಗತ್ಯವಾಗಿವೆ. ಇವುಗಳು ಬಲವಾದ ಅಯಸ್ಕಾಂತ ಗುಣ ಹೊಂದಿರುತ್ತವೆ.
ಕಡಿಮೆ ಗಾತ್ರದ ವಸ್ತುವಿನಲ್ಲಿ ಹೆಚ್ಚಿನ ಮ್ಯಾಗ್ನೆಟಿಕ್ ಪವರ್ ಇರುತ್ತದೆ. ಹೀಗಾಗಿ, ಇದಕ್ಕೆ ಬೇಡಿಕೆ ಬಹಳ ಇದೆ. ಈ ವಿರಳ ಭೂ ಖನಿಜ ಅಥವಾ ಮ್ಯಾಗ್ನೆಟ್ಗಳ ತಯಾರಿಕೆಯಲ್ಲಿ ಚೀನಾ ವಿಶ್ವದ ನಂಬರ್ ಒನ್ ಎನಿಸಿದೆ. ಸದ್ಯದಲ್ಲೇ ಡೊನಾಲ್ಡ್ ಟ್ರಂಪ್ ಅವರು ಚೀನಾಗೆ ಭೇಟಿಯಾಗುವ ಸಾಧ್ಯತೆ ಇದೆ.
ದಕ್ಷಿಣ ಕೊರಿಯಾ ಅಧ್ಯಕ್ಷ ಲೀ ಜೇ ಮ್ಯೂಂಗ್ ಅವರು ವಾಷಿಂಗ್ಟನ್ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಟ್ರಂಪ್ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ, ಚೀನಾ ವಿಚಾರ ಪ್ರಸ್ತಾಪ ಮಾಡಿ ಬೆದರಿಕೆ ಹಾಕಿದ್ದಾರೆ.
‘ಅವರ ಬಳಿ ಕೆಲ ಅಸ್ತ್ರಗಳಿವೆ. ನಮ್ಮ ಬಳಿ ಮಹಾ ಅಸ್ತ್ರಗಳಿವೆ. ಆದರೆ, ನಾವು ಅದನ್ನು ಪ್ರಯೋಗಿಸಲು ಇಚ್ಛಿಸುವುದಿಲ್ಲ. ಒಂದು ವೇಳೆ ನಾವು ಆ ಅಸ್ತ್ರ ಉಪಯೋಗಿಸಿದರೆ ಚೀನಾ ನಾಶವಾಗಿ ಹೋಗುತ್ತದೆ’ ಎಂದು ಈ ವೇಳೆ ಡೊನಾಲ್ಡ್ ಟ್ರಂಪ್ ಉದ್ಗರಿಸಿದ್ದಾರೆ.















