ಮನೆ ಕಾನೂನು ವ್ಯಕ್ತಿಯನ್ನು ಬಂಧಿಸುವಾಗ ಏತಕ್ಕಾಗಿ ಬಂಧಿಸಲಾಗುತ್ತಿದೆ ಎಂಬ ದಾಖಲೆ ನೀಡಬೇಕು: ಸುಪ್ರೀಂಕೋರ್ಟ್

ವ್ಯಕ್ತಿಯನ್ನು ಬಂಧಿಸುವಾಗ ಏತಕ್ಕಾಗಿ ಬಂಧಿಸಲಾಗುತ್ತಿದೆ ಎಂಬ ದಾಖಲೆ ನೀಡಬೇಕು: ಸುಪ್ರೀಂಕೋರ್ಟ್

0

ನವದೆಹಲಿ(Newdelhi): ಅಧಿಕಾರಿಗಳು ವ್ಯಕ್ತಿಯೊಬ್ಬನನ್ನು ಬಂಧಿಸುವಾಗ ಯಾವ ಆಧಾರದಲ್ಲಿ ಅಥವಾ ಯಾವ ಕಾರಣಕ್ಕೆ ಆತನನ್ನು ಬಂಧಿಸಲಾಗುತ್ತಿದೆ ಎಂಬುದರ ಕುರಿತ ದಾಖಲೆಗಳನ್ನು ಒದಗಿಸಬೇಕು ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ.

ಅಧಿಕಾರಿಗಳು ವ್ಯಕ್ತಿಯನ್ನು ಬಂಧಿಸುವಾಗ ಆತನಿಗೆ ದಾಖಲೆ ನೀಡದಿದ್ದರೆ ಆತನ ಪರಿಣಾಮಕಾರಿ ಪ್ರಾತಿನಿಧ್ಯ ಹಕ್ಕಿನ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.

ಮಣಿಪುರ ಪೊಲೀಸರು ಬುಯಾಮಯುಮ್‌ ಅಬ್ದುಲ್‌ ಹನಾನ್‌ ಎಂಬಾತನನ್ನು ‘ಮಾದಕ ದ್ರವ್ಯ ಹಾಗೂ ನಿದ್ರಾಜನ್ಯ ವಸ್ತುಗಳ ಅಕ್ರಮ ಸಾಗಣಿಕೆ ತಡೆ (ಪಿಐಟಿ–ಎನ್‌ಡಿಪಿಎಸ್)’ ಕಾಯ್ದೆಯಡಿ ಬಂಧಿಸಿದ್ದರು. ಇದನ್ನು ಹೈಕೋರ್ಟ್‌’ನಲ್ಲಿ ಪ್ರಶ್ನಿಸಿದ್ದ ಅಬ್ದುಲ್‌ ಹನಾನ್‌, ಬಂಧನದ ವೇಳೆ ತನಗೆ ಅಧಿಕಾರಿಗಳು ಏತಕ್ಕಾಗಿ ಬಂಧಿಸಲಾಗುತ್ತಿದೆ ಎಂಬುದರ ಕುರಿತ ದಾಖಲೆಯನ್ನು ಒದಗಿಸಿಲ್ಲ ಎಂದು ಆರೋಪಿಸಿದ್ದ.

ಆತನ ಅರ್ಜಿಯನ್ನು ಹೈಕೋರ್ಟ್‌ ಪುರಸ್ಕರಿಸಿತ್ತು.

 ಹೈಕೋರ್ಟ್‌ ನಿರ್ಧಾರ ಪ್ರಶ್ನಿಸಿ ಮಣಿಪುರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ನ್ಯಾಯಮೂರ್ತಿಗಳಾದ ಅಜಯ್‌ ರಸ್ತೋಗಿ ಮತ್ತು ಸಿ.ಟಿ.ರವಿಕುಮಾರ್‌ ಅವರನ್ನೊಳಗೊಂಡ ದ್ವಿಸದಸ್ಯ ನ್ಯಾಯಪೀಠ ಇದನ್ನು ತಿರಸ್ಕರಿಸಿದೆ.

ಕಾನೂನಿನಡಿ ನಿಗದಿಪಡಿಸಲಾಗಿರುವ ಕ್ರಮಗಳನ್ನು ಅನುಸರಿಸದೆಯೇ ವ್ಯಕ್ತಿಯನ್ನು ಬಂಧಿಸುವ ಮೂಲಕ ತಾತ್ಕಾಲಿಕವಾಗಿಯೂ ಆತನ ಹಕ್ಕನ್ನು ಉಲ್ಲಂಘಿಸಬಾರದು ಎಂದು ನ್ಯಾಯಪೀಠ ಹೇಳಿದೆ.