ಮನೆ ಅಪರಾಧ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ, ಗಂಡನನ್ನು ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿದ್ದ ಪತ್ನಿ

ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ, ಗಂಡನನ್ನು ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿದ್ದ ಪತ್ನಿ

0

ಶಿವಮೊಗ್ಗ : ಶಿವಮೊಗ್ಗದಲ್ಲಿ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನು ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿದ್ದ ಪತ್ನಿ ಹಾಗೂ ಆಕೆಯ ಪ್ರಿಯಕರನಿಗೆ ಭದ್ರಾವತಿಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ. ಪತ್ನಿ ಫ್ಲೋರಾ ನ್ಯಾನ್ಸಿ ಹಾಗೂ ಆಕೆಯ ಪ್ರಿಯಕರ ರಾಜಶೇಖರಯ್ಯ ಗಲ್ಲು ಶಿಕ್ಷೆಗೆ ಒಳಗಾಗಿದ್ದಾರೆ. ನ್ಯಾಯಾಧೀಶೆ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ಆದೇಶ ಹೊರಡಿಸಿದ್ದಾರೆ

ಏನಿದು ಪ್ರಕರಣ? – ಭದ್ರಾವತಿಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್​ ಆಗಿ ಕೆಲಸ ಮಾಡಿಕೊಂಡಿದ್ದ ಫ್ಲೋರಾ ನ್ಯಾನ್ಸಿ ಮತ್ತು ಭದ್ರಾವತಿ ನಗರದ ಪೇಪರ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಸುರಗಿತೋಪಿನ ವಾಸಿಯಾಗಿದ್ದ ಪ್ರಕಾಶ್ ಬಾಬು ಜೊತೆ 2014ರಲ್ಲಿ ವಿವಾಹವಾಗಿದ್ದರು. ಕೆಲ ವರ್ಷಗಳ ಬಳಿಕ ಫ್ಲೋರಾ ನ್ಯಾನ್ಸಿ ರಾಜಶೇಖರಯ್ಯ ಎಂಬಾತನ ಜೊತೆ ಅನೈತಿಕ ಸಂಬಂಧ ಹೊಂದಿದ್ದರು. ಈ ವಿಷಯ ಪತಿ ಪ್ರಕಾಶ ಬಾಬುಗೆ ತಿಳಿದು, ಗಲಾಟೆ ಮಾಡಿದ್ದನು. ಅನೈತಿಕ ಸಂಬಂಧಕ್ಕೆ ಅಡ್ಡಿ ಬಂದ ಹಿನ್ನೆಲೆ ಪತಿಯ ಕಥೆಯನ್ನು ಮುಗಿಸಲು ಪ್ರಿಯಕರನ ಜೊತೆ ಸೇರಿ ಪ್ಲಾನ್​ ಮಾಡಿದ್ದಳು.

2020ರ ಜನವರಿ 15 ರಂದು ಫ್ಲೋರಾ ನ್ಯಾನ್ಸಿ ಹಾಗೂ ಆಕೆಯ ಪ್ರಿಯಕರ ರಾಜಶೇಖರಯ್ಯ ಸೇರಿ ಪ್ರಕಾಶ್​ ಬಾಬುವನ್ನ ಕೊಲೆ ಮಾಡಿದ್ದಾರೆ. ಆ ದಿನ ರಾತ್ರಿ ಫ್ಲೋರಾ ನ್ಯಾನ್ಸಿ ತನ್ನ ಪತಿಗೆ ಜ್ಯೂಸ್​ನಲ್ಲಿ ಮತ್ತು ಬರುವ ಔಷಧಿಯನ್ನು ಮಿಕ್ಸ್​ ಮಾಡಿ ಕುಡಿಸಿದ್ದಳು. ಬಳಿಕ ಪತಿ ನಿದ್ರೆಗೆ ಜಾರುತ್ತಿದ್ದಂತೆ, ಪ್ರಿಯಕರ ರಾಜಶೇಖರಯ್ಯನನ್ನು ಮನೆಗೆ ಕರೆದಿದ್ದಾಳೆ. ಆರೋಪಿ ರಾಜಶೇಖರಯ್ಯ, ನಿದ್ರೆಯಲ್ಲಿದ್ದ ಪ್ರಕಾಶ್​ ಬಾಬುವಿನ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಇಬ್ಬರು ಸೇರಿ ಶವವನ್ನು ಭದ್ರ ನಾಲೆಗೆ ಎಸೆದು ಬಂದಿದ್ದರು.

ಈ ಪ್ರಕರಣ ಸಂಬಂಧ ಅಂದಿನ ಇನ್ಸ್‌ಪೆಕ್ಟರ್ ಇ.ಒ. ಮಂಜುನಾಥ್ ಅವರು ತನಿಖೆ ನಡೆಸಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಇದೀಗ, ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್, ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸುವುದರ ಜೊತೆಗೆ 14 ಲಕ್ಷ ದಂಡ ವಿಧಿಸಿದ್ದಾರೆ. ಅಲ್ಲದೇ ದೂರುದಾರರಿಗೆ 5 ಲಕ್ಷ ನೀಡುವಂತೆ ಆದೇಶ ಹೊರಡಿಸಿದ್ದಾರೆ.