ಮನೆ ರಾಜಕೀಯ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ: ಸಿದ್ದರಾಮಯ್ಯ ಘೋಷಣೆ

ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ: ಸಿದ್ದರಾಮಯ್ಯ ಘೋಷಣೆ

0

ಕೋಲಾರ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದಲೇ ಕಣಕ್ಕಿಳಿಯುವುದಾಗಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.

ನಗರದ ಮಿನಿ ಕ್ರೀಡಾಂಗಣದಲ್ಲಿ ಸೋಮವಾರ ಆಯೋಜಿದ್ದ ಕೋಲಾರ ಕ್ಷೇತ್ರದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಅವರು ಈ ನಿರ್ಧಾರ ಪ್ರಕಟಿಸಿದರು. ಆದರೆ, ಹೈಕಮಾಂಡ್ ಒಪ್ಪಿಗೆ ಮೇಲೆ ನನ್ನ ನಿರ್ಧಾರ ಅವಲಂಬಿಸಿದೆ ಎಂದರು.

ನಿಮ್ಮ ಅಭಿಮಾನ ತಿರಸ್ಕರಿಸಲು ಸಾಧ್ಯವೇ ಇಲ್ಲ. ಮುಂದಿನ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದ ನಾನೇ ಅಭ್ಯರ್ಥಿ ಎಂದು ಘೋಷಿಸಿದರು.

ಆದರೆ, ಕಾಂಗ್ರೆಸ್ ನಲ್ಲಿ ಅಭ್ಯರ್ಥಿ ಆಯ್ಕೆಗೆ ಒಂದು ಪ್ರಕ್ರಿಯೆ ಇದೆ. ನನ್ನ ತೀರ್ಮಾನಕ್ಕೆ ಕಾಂಗ್ರೆಸ್ ಹೈಕಮಾಂಡ್ ಒಪ್ಪಿಗೆ ಬೇಕಿದೆ. ನಾನೇ ಏಕಾಂಗಿಯಾಗಿ ಘೋಷಣೆ ಮಾಡಲು ಸಾಧ್ಯವಿಲ್ಲ. ಪಕ್ಷದಲ್ಲಿ ನನಗೆ ವಿಶೇಷ ನೀತಿ ಇಲ್ಲ. ಉಳಿದವರಂತೆ ನಾನು ಕೂಡ ಒಬ್ಬ. ಹೀಗಾಗಿ, ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದರು.

ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಗೆ ಮುನ್ನವೇ ಕ್ಷೇತ್ರ ಆಯ್ಕೆ ಮೂಲಕ ಅಖಾಡ ಸಜ್ಜು ಮಾಡಿಕೊಂಡಿದ್ದಾರೆ. ರಾಜ್ಯ ರಾಜಕೀಯ ವಲಯ ಚಿತ್ತ ಇನ್ನು ಕೋಲಾರ ವಿಧಾನಸಭಾ ಕ್ಷೇತ್ರದತ್ತ ಹರಿಯಲಿದೆ. ಅವರ ನಿರ್ಧಾರದಿಂದ ಬಿಜೆಪಿ ಹಾಗೂ ಜೆಡಿಎಸ್‌ನ ಮುಂದಿನ ತೀರ್ಮಾನ ಏನಾಗಿರಬಹುದೆಂದು ಕ್ಷೇತ್ರದ ಮತದಾರರು ಹಾಗೂ ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಬಹಳ ಕುತೂಹಲ ಮೂಡಿದೆ.

ಈಗಾಗಲೇ ಜೆಡಿಎಸ್‌ ಪಕ್ಷವು ಟೊಮೆಟೊ ಉದ್ಯಮಿ ಸಿಎಂಆರ್‌ ಶ್ರೀನಾಥ್‌ ಅವರನ್ನು ಕ್ಷೇತ್ರದ ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಆದರೆ, ಸಿದ್ದರಾಮಯ್ಯ ಸ್ಪರ್ಧೆ ಘೋಷಣೆ ಬಳಿಕವೂ ಅದಕ್ಕೆ ಬದ್ಧವಾಗಲಿದೆಯೇ ಅಥವಾ ಬದಲಾವಣೆ ಮಾಡಲಿದೆಯೇ ಎಂಬ ಪ್ರಶ್ನೆಯೂ ಉದ್ಭವಿಸಿದೆ. ಚುನಾವಣೆಗೆ ಇನ್ನೂ ನಾಲ್ಕು ತಿಂಗಳು ಬಾಕಿ ಉಳಿದಿರುವುದರಿಂದ ಸಿದ್ದರಾಮಯ್ಯ ವಿರುದ್ಧ ತಂತ್ರ ಹೆಣೆಯಲು ಬಿಜೆಪಿ ಹಾಗೂ ಜೆಡಿಎಸ್‌’ಗೆ ಹೆಚ್ಚಿನ ಸಮಯಾವಕಾಶ ಸಿಕ್ಕಿದ್ದು, ಮುಂದಿನ ದಿನಗಳ ನಡೆ ಭಾರಿ ಕುತೂಹಲ ಮೂಡಿಸಿದೆ. ವಿಶೇಷವೆಂದರೆ ಈ ಸಭೆಯಲ್ಲಿ ಕೆ.ಎಚ್.ಮುನಿಯಪ್ಪ ಹಾಗೂ ಅವರ ಬೆಂಬಲಿಗರೂ ಇದ್ದರು.

ಕೆ.ಆರ್.ರಮೇಶ್ ಕುಮಾರ್ ಹಾಗೂ ಅವರ ಬೆಂಬಲಿಗರ ಜೊತೆ ವೇದಿಕೆ ಹಂಚಿಕೊಂಡರು.