ಮನೆ ಯೋಗಾಸನ ಯೋಗದಿಂದ ಮಧುಮೇಹವನ್ನು ನಿಯಂತ್ರಿಸಬಹುದು

ಯೋಗದಿಂದ ಮಧುಮೇಹವನ್ನು ನಿಯಂತ್ರಿಸಬಹುದು

0

ನಮ್ಮ ಭಾರತದ ಸಂಸ್ಕೃತಿಯಲ್ಲಿ ಯೋಗಾಭ್ಯಾಸಕ್ಕೆ ವಿಶೇಷವಾದ ಸ್ಥಾನಮಾನವಿದೆ. ಪುರಾತನ ಕಾಲದಿಂದ ಇಂದಿನವರೆಗೂ ಯೋಗ ತನ್ನ ಮೌಲ್ಯವನ್ನು ಉಳಿಸಿಕೊಂಡು ಬಂದಿದೆ. ಜನರಿಗೂ ಸಹ ಈ ಅಭ್ಯಾಸ ಕಷ್ಟಕರ ಎನಿಸುವುದಿಲ್ಲ. ಏಕೆಂದರೆ ಯೋಗಾಭ್ಯಾಸ ಮಾಡಲು ಯಾವುದೇ ಉಪಕರಣಗಳ ಅವಶ್ಯಕತೆ ಇಲ್ಲ.

ಯೋಗಾಭ್ಯಾಸದಿಂದ ನಮ್ಮ ಆರೋಗ್ಯದ ಮೇಲೆ ಸಾಕಷ್ಟು ಸಕಾರಾತ್ಮಕ ಪರಿಣಾಮಗಳು ಬೀರುತ್ತವೆ ಎಂದು ತಿಳಿದವರು ಹೇಳುತ್ತಾರೆ. ಅತ್ಯಂತ ಕಡಿಮೆ ಸಮಯದಲ್ಲಿ ನಮಗೆ ಯೋಗದಿಂದ ಒಳ್ಳೆಯ ಲಾಭಗಳು ಲಭ್ಯವಾಗುತ್ತವೆ.

ನಮ್ಮನ್ನು ನಾವು ಆರೋಗ್ಯವಂತರನ್ನಾಗಿ ಕಾಪಾಡಿಕೊಳ್ಳಬೇಕೆಂದು ನಾವು ಅಂದುಕೊಂಡರೆ ಅದಕ್ಕಾಗಿ ನಮ್ಮ ದೇಹವನ್ನು ಸಾಧ್ಯವಾದಷ್ಟು ದಂಡಿಸಬೇಕು. ಅದು ವ್ಯಾಯಾಮವೇ ಆಗಿರಲಿ ಅಥವಾ ಯೋಗಾಭ್ಯಾಸವೇ ಆಗಿರಲಿ. ಒಟ್ಟಿನಲ್ಲಿ ನಮ್ಮ ದೇಹದ ರೋಗರುಜಿನಗಳು ದೂರ ಆಗಬೇಕು ಅಷ್ಟೇ.

ವಿಪರೀತಕರಣಿ ಯೋಗ ಮಾಡುವುದು ಹೇಗೆ?

• ಮೊದಲಿಗೆ ನೀವು ಗೋಡೆಯ ಪಕ್ಕ ನಿಮ್ಮ ದೇಹದ ಬಲಭಾಗ ಬರುವಂತೆ ಕುಳಿತುಕೊಳ್ಳಿ

• ಈಗ ನಿಧಾನವಾಗಿ ನಿಮ್ಮ ಕಾಲುಗಳನ್ನು ಗೋಡೆಗೆ ಹೊಂದಿಕೊಂಡಂತೆ ಮೇಲಕ್ಕೆತ್ತಲು ಪ್ರಯತ್ನಿಸಿ.

• ಈ ಸಮಯದಲ್ಲಿ ನಿಮ್ಮ ಬೆನ್ನು ಮತ್ತು ತಲೆ ನೆಲದ ಮೇಲೆ ಇರಬೇಕು. ಅಂದರೆ ನೀವು ಅಂಗಾತ ಮಲಗಿಕೊಂಡು 90 ಡಿಗ್ರಿ ಆಕಾರದಲ್ಲಿ ನಿಮ್ಮ ಕಾಲುಗಳನ್ನು ಗೋಡೆಯಮೇಲೆ ನೇರವಾಗಿ ಇಟ್ಟುಕೊಂಡಿರಬೇಕು

• ನಿಮ್ಮ ಎರಡು ಕೈಗಳು ನಿಮ್ಮ ದೇಹದ ಅಕ್ಕಪಕ್ಕ ಇರಬೇಕು ಮತ್ತು ನೀವು ವಿಶ್ರಾಂತ ಸ್ಥಿತಿಯಲ್ಲಿ ಇದ್ದು ಸುಮಾರು 15 ನಿಮಿಷಗಳ ಕಾಲ ದೀರ್ಘವಾಗಿ ಉಸಿರಾಡುತ್ತಾ ಮಲಗಿರಬೇಕು.

• ಕಾಲುಗಳನ್ನು ನಿಮ್ಮ ಎದೆಗೆ ತಾಗುವಂತೆ ಮಡಚಿಕೊಂಡು ನಿಮ್ಮ ಎಡಬದಿಗೆ ಅಥವಾ ಬಲಬದಿಗೆ ಹೊರಳಿ ಮತ್ತೆ ಮೊದಲಿನ ಸ್ಥಿತಿಗೆ ಬನ್ನಿ.

ಈ ಯೋಗಾಭ್ಯಾಸದಿಂದ ಮಧುಮೇಹ ಹೇಗೆ ನಿಯಂತ್ರಣಕ್ಕೆ ಬರುತ್ತದೆ?

• ನಾವು ಮಾಡುವ ಯೋಗ ಅಥವಾ ವ್ಯಾಯಾಮ ನಮ್ಮ ದೇಹದ ಒಳಗಿನ ಅಂಗಾಂಗಗಳನ್ನು ಉತ್ತೇಜಿಸಿ ನಮ್ಮ ದೇಹದಲ್ಲಿ ಮೆಟಬಾಲಿಸಂ ಪ್ರಕ್ರಿಯೆಯನ್ನು ಚುರುಕುಗೊಳಿಸುತ್ತದೆ.

• ಇದರಿಂದ ನಮ್ಮ ಎಂಡೋಕ್ರೈನ್ ವ್ಯವಸ್ಥೆ ಸಮತೋಲನಗೊಳ್ಳುವ ಮೂಲಕ ನಮ್ಮ ದೇಹದಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣ ಮಾಡುತ್ತದೆ.

• ನಾವು ಮಾಡುವ ವಿಪರೀತಕರಣಿ ಯೋಗಾಭ್ಯಾಸದಲ್ಲಿ ನಮ್ಮ ದೇಹ ಗುರುತ್ವಾಕರ್ಷಣೆಯ ವಿರುದ್ಧ ಇರುವುದರಿಂದ ಹೆಚ್ಚಿನ ವಿಶ್ರಾಂತಿ ಸಿಕ್ಕಂತೆ ಆಗುತ್ತದೆ ಜೊತೆಗೆ ನಮ್ಮ ಮನಸ್ಸನ್ನು ಶಾಂತಗೊಳಿಸುವ ಪ್ರಕ್ರಿಯೆಯೊಂದಿಗೆ ನಮ್ಮ ದೇಹದಲ್ಲಿ ಒತ್ತಡದ ಹಾರ್ಮೋನ್ ಎಂದು ಕರೆಸಿಕೊಳ್ಳುವ ಕಾರ್ಟಿಸಾಲ್ ಅಂಶದ ಮಟ್ಟವನ್ನು ಕಡಿಮೆ ಮಾಡುತ್ತದೆ.

• ಒಬ್ಬ ವ್ಯಕ್ತಿಗೆ ಮಾನಸಿಕ ಒತ್ತಡ ಹೆಚ್ಚಾದಂತೆ ಆತನ ದೇಹದ ರಕ್ತದಲ್ಲಿನ ಸಕ್ಕರೆ ಪ್ರಮಾಣದಲ್ಲಿ ಕೂಡ ಏರುಪೇರಾಗುವ ಸಾಧ್ಯತೆ ಇದೆ. ಹಾಗಾಗಿ ಮಾನಸಿಕ ಒತ್ತಡವನ್ನು ಮೊದಲು ಕಡಿಮೆ ಮಾಡಿಕೊಂಡರೆ ತಲೆ ನೋವು ನಿಯಂತ್ರಣಕ್ಕೆ ಬಂದು ಮೆದುಳಿನ ಭಾಗಕ್ಕೆ ಹೆಚ್ಚಾಗಿ ರಕ್ತ ಸಂಚಾರ ಆಗುವುದರ ಮೂಲಕ ನಮ್ಮ ಮಾನಸಿಕ ಸ್ಥಿತಿ ಮಿತಿಯನ್ನು ಸಹಜಸ್ಥಿತಿಗೆ ಮರಳಿಸುತ್ತದೆ.

• ದೈಹಿಕ ಸ್ವಾಸ್ಥ್ಯ ತಜ್ಞರ ಪ್ರಕಾರ ನಾವು ವಿಪರಿತ ಕರಣಿ ಯೋಗಾಭ್ಯಾಸವನ್ನು ದಿನಕ್ಕೆ ಸುಮಾರು 150 ನಿಮಿಷಗಳ ಕಾಲ ಮಾಡಿದರೆ ವಿವಿಧ ಆಯಾಮಗಳಲ್ಲಿ ನಮ್ಮ ದೇಹಕ್ಕೆ ಹೆಚ್ಚಿನ ಆರೋಗ್ಯಕರ ಲಾಭಗಳು ಅನುಮಾನವಿಲ್ಲ.

ಕೆಲವು ಮುನ್ನೆಚ್ಚರಿಕಾ ಕ್ರಮಗಳು

• ವಿಪರೀತಕರಣಿ ಯೋಗಾಭ್ಯಾಸ ತುಂಬಾ ಸುಲಭವಾದ ಒಂದು ಅಭ್ಯಾಸವಾಗಿದ್ದು, ಯಾವ ವಯಸ್ಸಿನವರು ಬೇಕಾದರೂ ಇದನ್ನು ಸುಲಭವಾಗಿ ಪ್ರಯತ್ನ ಮಾಡಬಹುದು.

• ಆದರೆ ಈ ಯೋಗಾಭ್ಯಾಸವನ್ನು ಮಾಡುವ ಮುಂಚೆ ಕೆಲವೊಂದು ಅಂಶಗಳನ್ನು ಪ್ರತಿಯೊಬ್ಬರು ನೆನಪಿನಲ್ಲಿಟ್ಟುಕೊಳ್ಳಬೇಕು. ಅದೇನೆಂದರೆ ಯಾವುದೇ ಕಾರಣಕ್ಕೂ ವಿಪರೀತಕರಣಿ ಅಭ್ಯಾಸವನ್ನು ಊಟ ಮಾಡಿದ ತಕ್ಷಣ ಮಾಡಲು ಹೋಗಬಾರದು.

• ನೀವು ಗುರುತ್ವಾಕರ್ಷಣೆಯ ವಿರುದ್ಧ ವಿಪರೀತಕರಣಿ ಯೋಗಾಭ್ಯಾಸವನ್ನು ಮಾಡಲು ಹೊರಟಿರುವುದರಿಂದ ನಿಮ್ಮ ದೇಹದಲ್ಲಿ ಜೀರ್ಣ ಪ್ರಕ್ರಿಯೆ ತುಂಬಾ ನಿಧಾನಗೊಳ್ಳುತ್ತದೆ ಮತ್ತು ಇದರಿಂದ ಹೊಟ್ಟೆ ಉಬ್ಬರ ಮತ್ತು ಎದೆಯುರಿ ಸಹ ಉಂಟಾಗಬಹುದು.

• ಒಂದು ವೇಳೆ ನಿಮಗೆ ದೇಹದ ಯಾವುದೇ ಭಾಗದಲ್ಲಿ ಗಾಯ ಉಂಟಾಗಿದ್ದರೆ ಅಥವಾ ನೀವು ಇತ್ತೀಚಿಗಷ್ಟೇ ಯಾವುದಾದರೂ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೆ, ದಯವಿಟ್ಟು ಈ ಯೋಗಾಭ್ಯಾಸವನ್ನು ಮಾಡಲು ಹೋಗಬೇಡಿ.

• ವಿಪರೀತಕರಣಿ ಯೋಗಾಭ್ಯಾಸ ಮಾಡುವಾಗ ಒಂದು ವೇಳೆ ನಿಮಗೆ ನೋವು ಕಂಡುಬಂದರೆ ಅಥವಾ ಯೋಗಾಭ್ಯಾಸ ಮಾಡಲು ಆರಾಮದಾಯಕ ಅನುಭವ ಉಂಟಾಗದೆ ಇದ್ದರೆ ತಕ್ಷಣವೇ ಈ ಯೋಗಾಭ್ಯಾಸವನ್ನು ಕೈ ಬಿಡುವುದು ಒಳ್ಳೆಯದು.