ಮನೆ ಅಪರಾಧ ಅಪ್ರಾಪ್ತೆ ಅಪಹರಿಸಿ ಮದುವೆಯಾಗುವಂತೆ ಪೀಡಿಸಿ ಅತ್ಯಾಚಾರ?: ದೂರು ದಾಖಲು

ಅಪ್ರಾಪ್ತೆ ಅಪಹರಿಸಿ ಮದುವೆಯಾಗುವಂತೆ ಪೀಡಿಸಿ ಅತ್ಯಾಚಾರ?: ದೂರು ದಾಖಲು

0

ಮೈಸೂರು(Mysuru): ಬಾಲಕಿಯನ್ನು ಅಪಹರಿಸಿ ಮದುವೆಯಾಗುವಂತೆ ಒತ್ತಾಯಿಸಿರುವುದಲ್ಲದೇ, ಲೈಂಗಿಕ ಕಿರುಕುಳ ನೀಡಿ ಚಿನ್ನಾಭರಣ ಕಸಿದು ಬಾಲಮಂದಿರಕ್ಕೆ ಸೇರಿಸಿದ್ದಾರೆ ಎಂದು ಆರೋಪಿಸಿ ಸಂತ್ರಸ್ತೆ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ನಂಜನಗೂಡಿನ ಒಕ್ಕಲಗೇರಿಯ ಬಾಲಕಿ ತನ್ನನ್ನು ಹೆಚ್.ಡಿ ಕೋಟೆ ಮೂಲದ ಅರುಣ್ ಎಂಬಾತ ಅಪಹರಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

ಘಟನೆ: ಅಪ್ರಾಪ್ತೆ ಕಳೆದ ವರ್ಷ ಹೆಚ್.ಡಿ ಕೋಟೆ ತಾಲೂಕಿನ ಕಾರಾಪುರದಲ್ಲಿರುವ ತನ್ನ ದೊಡ್ಡಪ್ಪನ ಮನೆ ಗೃಹಪ್ರವೇಶಕ್ಕೆ ಹೋಗಿದ್ದ ವೇಳೆ ಆಕೆಯ ಸಂಬಂಧಿಕನಾದ ಅರುಣ್ ಎಂಬಾತನ ಪರಿಚಯವಾಗಿ ಇವರಿಬ್ಬರ ನಡುವೆ ಪರಸ್ಪರ ಪ್ರೇಮಾಂಕುರವಾಗಿತ್ತು ಎನ್ನಲಾಗಿದೆ. ಆದರೆ, ಈಕೆಯ ಕುಟುಂಬಸ್ಥರು ತಮಿಳುನಾಡಿನ ಯುವಕನೊಬ್ಬನ ಜೊತೆ ಮದುವೆ ಮಾಡಲು ಕಳೆದ ಫೆಬ್ರವರಿ 6 ರಂದು ನಿಶ್ಚಿತಾರ್ಥ ಮಾಡಿಸಿದ್ದರು.ಈ ವಿಷಯ ತಿಳಿದ ಅರುಣ್ ಮತ್ತು ಆತನ ಸಹೋದರ ಫೆಬ್ರವರಿ 15 ರಂದು ನಂಜನಗೂಡಿನಲ್ಲಿರುವ ಬಾಲಕಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಂದು ಆಕೆಯನ್ನು ಮೈಸೂರಿನಲ್ಲಿರುವ ತನ್ನ ಚಿಕ್ಕಮ್ಮ ಅಶ್ವಿನಿ ನೋಡಬೇಕೆನ್ನುತ್ತಿದ್ದಾರೆ ಎಂದು ಹೇಳಿ ಬಲವಂತವಾಗಿ ಅಪ್ರಾಪ್ತೆಯನ್ನು ಮೈಸೂರಿನ ಕುಂಬಾರಕೊಪ್ಪಲಿನಲ್ಲಿರುವ ಅಶ್ವಿನಿ ಅವರ ಮನೆಗೆ ಕರೆತಂದಿದ್ದಾರೆ.

ನಂತರ ಅರುಣ್, ಸಹೋದರ ಅಭಿ, ಚಿಕ್ಕಮ್ಮ ಅಶ್ವಿನಿ ಅವರು ಬಾಲಕಿಯೊಂದಿಗೆ ಅರಣ್​ನನ್ನು ಮದುವೆಯಾಗು ಎಂದು ಕಿರುಕುಳ ನೀಡಿದ್ದಾರೆ. ಆದರೆ, ಬಾಲಕಿ ತನಗೆ ಈಗಾಗಲೇ ನಿಶ್ಚಿತಾರ್ಥವಾಗಿದೆ ಎಂದು ಅರುಣ್​ನನ್ನು ನಿರಾಕರಿಸಿದ್ದಾಳೆ. ಮದುವೆಗೆ ನಿರಾಕರಿಸಿದ ಬಾಲಕಿಯನ್ನು ಬಲವಂತವಾಗಿ ಮೂರು ದಿನಗಳ ಕಾಲ ಗೃಹಬಂಧನದಲ್ಲಿಟ್ಟು ಅತ್ಯಾಚಾರ ಎಸಗಿ ಆಕೆಯ ಬಳಿಯಿದ್ದ 42 ಗ್ರಾಂ ಚಿನ್ನಾಭರಣ ಹಾಗೂ ಮೊಬೈಲ್​ ಕಸಿದುಕೊಂಡಿದ್ದಾರೆ. ಬಳಿಕ ಪೊಲೀಸರಿಗೆ ಕರೆಮಾಡಿ ಆಕೆಯನ್ನು ಪೊಲೀಸರೊಟ್ಟಿಗೆ ಬಾಲಮಂದಿರಕ್ಕೆ ಕಳುಹಿಸಿದ್ದಾರೆ. ಈ ವಿಚಾರ ತಿಳಿದು ಬಾಲಕಿಯ ಅಜ್ಜಿ ಆಕೆಯನ್ನು ಬಾಲಮಂದಿರದಿಂದ ಮನೆಗೆ ಕರೆ ತಂದಿದ್ದಾರೆ.

ಈ ಸಂಬಂಧ ಸಂತ್ರಸ್ತೆ ಬಾಲಕಿಯು ನಂಜನಗೂಡು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಜೂನ್ 3ರಂದು ತಡವಾಗಿ ದೂರು ನೀಡಿದ್ದಾರೆ.

ಪ್ರಕರಣ ಗೊಂದಲದಿಂದ ಕೂಡಿರುವುದರಿಂದ ಪೊಲೀಸರು ಕೂಲಂಕಷವಾಗಿ ತನಿಖೆ ಕೈಗೊಂಡಿದ್ದಾರೆ.

ಹಿಂದಿನ ಲೇಖನಜೂನ್ ೧೩ ರಂದು ನಡೆಯುವ ವಿಧಾನ ಪರಿಷತ್ ಚುನಾವಣೆಗೆ ಸಕಲ ಸಿದ್ದತೆ
ಮುಂದಿನ ಲೇಖನಆದೇಶಗಳ ಪ್ರಮಾಣೀಕೃತ ಪ್ರತಿಗಾಗಿ ಒತ್ತಾಯಿಸಬೇಡಿ; ಡೌನ್ಲೋಡ್ ಮಾಡಿದ ಪ್ರತಿಗಳನ್ನು ವಕೀಲರು ಸಾಕಷ್ಟು ಪ್ರಮಾಣೀಕರಿಸಿದ್ದಾರೆ: ಹಿಮಾಚಲ ಪ್ರದೇಶ ಹೈಕೋರ್ಟ್