ಮನೆ ರಾಜ್ಯ ಜೂನ್ ೧೩ ರಂದು ನಡೆಯುವ ವಿಧಾನ ಪರಿಷತ್ ಚುನಾವಣೆಗೆ ಸಕಲ ಸಿದ್ದತೆ

ಜೂನ್ ೧೩ ರಂದು ನಡೆಯುವ ವಿಧಾನ ಪರಿಷತ್ ಚುನಾವಣೆಗೆ ಸಕಲ ಸಿದ್ದತೆ

0

ಮೈಸೂರು: ‘ದಕ್ಷಿಣ ಪದವೀಧರರ ಕ್ಷೇತ್ರದಿಂದ ವಿಧಾನಪರಿಷತ್‌ಗೆ ಜೂನ್‌ 13ರಂದು ನಡೆಯಲಿರುವ ಚುನಾವಣೆಗೆ ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಗಳಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಪ್ರಾದೇಶಿಕ ಆಯುಕ್ತರೂ ಆಗಿರುವ ಚುನಾವಣಾಧಿಕಾರಿ ಡಾ.ಜಿ.ಸಿ.ಪ್ರಕಾಶ್‌ ತಿಳಿಸಿದರು.
‘ಅಂದು ಹಕ್ಕು ಚಲಾಯಿಸುವುದಕ್ಕಾಗಿ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿದ ಪದವೀಧರ ಮತದಾರರಿಗೆ ವಿಶೇಷ ಸಾಂದರ್ಭಿಕ ರಜೆ ನೀಡಲಾಗಿದೆ. ರಾಜ್ಯದ ಯಾವುದೇ ಭಾಗದಲ್ಲಿದ್ದರೂ ಅವರಿಗೆ ರಜೆ ಅನ್ವಯವಾಗಲಿದೆ. ಶಾಲಾ-ಕಾಲೇಜುಗಳಿಗೆ ಅಥವಾ ಸಂಸ್ಥೆಗಳಿಗೆ ರಜೆ ಇರುವುದಿಲ್ಲ’ ಎಂದು ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾಹಿತಿ ನೀಡಿದರು.
ರಾಜಕೀಯ ಪಕ್ಷಗಳ ಮನವಿಯನ್ನು ಚುನಾವಣಾ ಆಯೋಗ ಪುರಸ್ಕರಿಸಿದ್ದು, ಮತದಾನಕ್ಕೆ ನಿಗದಿಪಡಿಸಿದ್ದ ಸಮಯವನ್ನು ಬೆಳಿಗ್ಗೆ 8ರಿಂದ ಸಂಜೆ 4ರ ಬದಲಿಗೆ ಬೆಳಿಗ್ಗೆ 8ರಿಂದ ಸಂಜೆ 5ರವರೆಗೆ ವಿಸ್ತರಿಸಲಾಗಿದೆ. ಪ್ರಚಾರಕ್ಕಾಗಿ ಹೊರ ಜಿಲ್ಲೆಗಳಿಂದ ಬಂದಿರುವ ಮತದಾರರಲ್ಲದ ಗಣ್ಯ ವ್ಯಕ್ತಿಗಳು ಕ್ಷೇತ್ರದ ವ್ಯಾಪ್ತಿಯಿಂದ ಹೊರ ಹೋಗಬೇಕು’ ಎಂದು ತಿಳಿಸಿದರು.
150 ಮತಗಟ್ಟೆಗಳು:
‘ಒಟ್ಟು 1,41,961 ಮಂದಿ ಮತದಾರರಿದ್ದು, 150 ಮತಗಟ್ಟೆಗಳನ್ನು ತೆರಯಲಾಗಿದೆ. ಪ್ರತಿ ಮತಗಟ್ಟೆಗೂ ಮೈಕ್ರೋ ಅಬ್ಸರ್ವರ್‌ಗಳನ್ನು ನೇಮಿಸಲಾಗಿದೆ. ಪ್ರಕ್ರಿಯೆಯನ್ನು ವಿಡಿಯೊ ಮಾಡಲಾಗುವುದು. 68 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಹಾಸನದಲ್ಲಿ 2, ಮಂಡ್ಯದಲ್ಲಿ 13 ಮತ್ತು ಮೈಸೂರಿನಲ್ಲಿ 2 ಅತಿಸೂಕ್ಷ್ಮ ಮತಗಟ್ಟೆಗಳಿದ್ದು, ಅಲ್ಲಿ ಹೆಚ್ಚಿನ ನಿಗಾ ವಹಿಸಲಾಗುವುದು. ಚುನಾವಣಾ ಕಾರ್ಯಕ್ಕಾಗಿ 600 ಸಿಬ್ಬಂದಿಯನ್ನು ಬಳಸಲಾಗುತ್ತಿದೆ. ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡವರು ಮತದಾರರಾಗಿದ್ದಲ್ಲಿ ಅವರಿಗೆ ಅಂಚೆ ಮತ‍ಪತ್ರಗಳನ್ನು ಒದಗಿಸಲಾಗಿದೆ’ ಎಂದು ವಿವರಿಸಿದರು.
‘ನಾಲ್ಕೂ ಜಿಲ್ಲೆಗಳ ಮತಪೆಟ್ಟಿಗೆಗಳನ್ನು ಮೈಸೂರಿನ ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಭದ್ರತಾ ಕೊಠಡಿಗೆ ತಂದು ಸಂಗ್ರಹಿಸಲಾಗುವುದು. ಅಲ್ಲಿ ಮತ ಎಣಿಕೆಯು ಜೂನ್‌ 15ರಂದು ಬೆಳಿಗ್ಗೆ 8ರಿಂದ ಆರಂಭಗೊಳ್ಳಲಿದೆ. ಇದಕ್ಕಾಗಿ 28 ಟೇಬಲ್‌ಗಳನ್ನು ಅಳವಡಿಸಲಾಗಿದೆ. ಒಟ್ಟು ಮತದಾನ ಪ್ರಮಾಣದಲ್ಲಿ ಶೇ 50ಕ್ಕಿಂತ ಹೆಚ್ಚಿನ ಪ್ರಥಮ ಪ್ರಾಶಸ್ತ್ಯದ ಮತ ಗಳಿಸಿದವರನ್ನು ವಿಜೇತರೆಂದು ಘೋಷಿಸಲಾಗುವುದು. ಇಲ್ಲದಿದ್ದಲ್ಲಿ ಮುಂದಿನ ಪ್ರಕ್ರಿಯೆಯಾಗಿ, ಎಲಿಮಿನೇಷನ್‌ ಹಂತ ನಡೆಸಲಾಗುವುದು’ ಎಂದು ತಿಳಿಸಿದರು.
‘ಮತದಾರರಿಗೆ ಬಲಗೈ ತೋರುಬೆರಳಿಗೆ ಅಳಿಸಲಾಗದ ಶಾಯಿ ಹಾಕಲಾಗುವುದು’ ಎಂದರು.
‘ಕಳೆದ ಚುನಾವಣೆಯಲ್ಲಿ ಶೇ 40ರಷ್ಟು ಮತದಾನವಾಗಿತ್ತು’ ಎಂದು ಹೇಳಿದರು.
516 ಪ್ರಕರಣ ದಾಖಲು:
‘ಮಾದರಿ ನೀತಿಸಂಹಿತೆ ಉಲ್ಲಂಘನೆ ಹಿನ್ನೆಲೆಯಯಲ್ಲಿ ಮೈಸೂರಿನಲ್ಲಿ 178, ಚಾಮರಾಜನಗರದಲ್ಲಿ 162, ಮಂಡ್ಯದಲ್ಲಿ 113 ಮತ್ತು ಹಾಸನದಲ್ಲಿ 63 ಸೇರಿ ಒಟ್ಟು 516 ಪ್ರಕರಣಗಳನ್ನು ದಾಖಲಿಸಲಾಗಿದೆ’ ಎಂದು ಪ್ರಕಾಶ್ ಮಾಹಿತಿ ನೀಡಿದರು.
‘₹ 2.34 ಲಕ್ಷ ಮೌಲ್ಯದ ಮದ್ಯ, ₹ 4,95 ಲಕ್ಷ ಮೌಲ್ಯದ 12 ವಾಹನಗಳು ಮತ್ತು ₹ 7.17 ಲಕ್ಷ ಮೌಲ್ಯದ 21.359 ಕೆ.ಜಿ. ಗಂಜಾ ವಶಕ್ಕೆ ಪಡೆಯಲಾಗಿದೆ. ನಗದು ಜಪ್ತಿಯಾಗಿಲ್ಲ’ ಎಂದು ತಿಳಿಸಿದರು.
ಸಹಾಯಕ ಚುನಾವಣಾಧಿಕಾರಿಗಳಾದ ಶಿವರಾಜ್‌ ಮತ್ತು ರೂಪಶ್ರೀ ಇದ್ದರು.

ಹಿಂದಿನ ಲೇಖನರಾಜ್ಯದಲ್ಲಿ ಶಾಂತಿ ಕಾಪಾಡಲು ಮುನ್ನೆಚ್ಚರಿಕಾ ಕ್ರಮ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮುಂದಿನ ಲೇಖನಅಪ್ರಾಪ್ತೆ ಅಪಹರಿಸಿ ಮದುವೆಯಾಗುವಂತೆ ಪೀಡಿಸಿ ಅತ್ಯಾಚಾರ?: ದೂರು ದಾಖಲು