ಮನೆ ಸಾಹಿತ್ಯ ತಾರುಣ್ಯದ ತಂಡಗಳು

ತಾರುಣ್ಯದ ತಂಡಗಳು

0

      ನೀವು ಐನ್‌ಸ್ಟೀನ್, ಸಾರಾಭಾಯಿ, ಬಾಬಾ ಅವರಂತಹ ವಿಜ್ಞಾನಿಗಳ ಜೀವನ ಚರಿತ್ರೆಯನ್ನು ಓದಿದರೆ ಅವರು ಸಂಗೀತ, ಲಲಿತ ಕಲೆಯಂತಹ ಯಾವುದೋ ಒಂದು ವಿಜ್ಞಾನೇತರ ಆಸಕ್ತಿಯನ್ನು ಹೊಂದಿದ್ದುದನ್ನು ತಿಳಿದುಕೊಳ್ಳುತ್ತೀರಿ. ಕೆಲಸದ ಒತ್ತಡದಿಂದ ನಿರಾಳವಾಗಲು ಇಂಥ ಆರೋಗ್ಯಕಾರಿ ಹವ್ಯಾಸಗಳು ಸಹಾಯವನ್ನು ಮಾಡುತ್ತವೆ. ನಿಮಗೂ ಕೂಡ ಸ್ಟ್ಯಾಂಪ್ ಸಂಗ್ರಹ, ಫೊಟೋ ಸಂಗ್ರಹ, ನೃತ್ಯ, ಸಂಗೀತದಂಥ ಹವ್ಯಾಸಗಳು ಇರಬಹುದು. ಇಲ್ಲವೆ ಇಂಥ ಯಾವುದಾದರೊಂದು ಹವ್ಯಾಸವನ್ನು ರೂಢಿಸಿಕೊಳ್ಳಬೇಕು.

Join Our Whatsapp Group

      ಹದಿಹರೆಯದಲ್ಲಿ ಹವ್ಯಾಸಗಳು ಕಾರ್ಯ ಒತ್ತಡದಿಂದ ನಿರಾಳತೆಯನ್ನು ಒದಗಿಸುವುದಕ್ಕಿಂತಲೂ ಹೆಚ್ಚಿನ ಉದ್ದೇಶಗಳಿಗಾಗಿ ಅಗತ್ಯವಿದೆ. ಹದಿಹರೆಯದಲ್ಲಿ ಉಂಟಾಗುವ ದೈಹಿಕ ಬೆಳೆಣಿಗೆಗಳು ಅನೇಕ ಮಗ್ಗುಲುಗಳಿಂದ ಮಾನಸಿಕ ವಿಕಾಸವನ್ನು ಉಂಟು ಮಾಡುತ್ತವೆ. ಈ ಬೆಳೆವಣಿಗೆ ಮತ್ತು ವಿಕಾಸಗಳು ಅಪಾರವಾದ ಶಕ್ತಿ ಸಂಚಯನವನ್ನು ಮಾಡುತ್ತವೆ. ವಿಶೇಷವಾದ ಆಲೋಚನೆಗಳು ಬರುತ್ತವೆ. ಈ ಸಂದರ್ಭದಲ್ಲಿ ಮಕ್ಕಳು ಸ್ವಾಭಾವಿಕವಾಗಿ ಹೆಚ್ಚು ಹೆಚ್ಚು ಚಟುವಟಿಕೆಗಳಲ್ಲಿ ನಿರತರಾಗಿರುತ್ತಾರೆ. ಆದರೆ ಈ ಸಮಯದ ಮಾನಸಿಕ ಸ್ಥಿತಿಯು ಕುಟುಂಬದ ಹಿರಿಯರಿಂದ ಮತ್ತು ಶಿಕ್ಷಕರಿಂದ ಸ್ವತಂತ್ರವಾಗಿದ್ದು ಸ್ವಂತ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ತವಕ ಪಡುತ್ತದೆ. ಆದ್ದರಿಂದ ಹಿರಿಯರ ಅವಲಂಬನೆಯು ಮಕ್ಕಳಿಗೆ ಇಷ್ಟವಾಗುವುದಿಲ್ಲ. ಅದರ ಪರಿಣಾಮವೆಂದರೆ ತಂಡ ಪ್ರವೃತ್ತಿಯ ಬೆಳೆವಣಿಗೆ. ಹದಿಹರೆಯವರಿಗೆ ಸಮ ವಯಸ್ಕ ಗೆಳೆಯ-ಗೆಳತಿಯರು ಅತ್ಯಂತ ಪ್ರಿಯರಾಗಿರುತ್ತಾರೆ. ಮೊದಲೇ ಕ್ರಿಯಾಶೀಲವಾಗಿರುವವರು ತಂಡದೊಂದಿಗೆ ಸೇರಿಕೊಂಡಾಗ ತಂಡಡವು ಅತ್ಯಂತ ಪ್ರಬಲವಾಗಿರುತ್ತದೆ.

     ಹದಿಹರೆಯದ ಇಂತಹ ತಂಡಗಳು ಲಭ್ಯವಾಗಿರುವ ಪರಿಸರದ ಬಗ್ಗೆ ಹೆಚ್ಚು ಹೆಚ್ಚು ಅಸಮಧಾನವನ್ನು ಹೊಂದಿರುತ್ತವೆ. ಈ ಅಸಮಧಾನವು ಬಂಡುಕೋರ ಪ್ರವೃತ್ತಿಯಾಗಿ ಕಂಡುಬರಲು ಕಾಯುತ್ತಿರುತ್ತದೆ. ಒಂದು ಆರೋಗ್ಯಕಾರಿ ಹವ್ಯಾಸ ಇಲ್ಲದೆ ಇದ್ದರೆ ಇಂತಹ ತಂಡಗಳು ಇಡಿಗೆ ಇಡಿಯಾಗಿ ಪೋಲಿ ಬಿದ್ದು ಬಿಡುತ್ತವೆ. ಆದ್ದರಿಂದ ಹದಿಹರೆಯದಲ್ಲಿ ಅತ್ಯಗತ್ಯವಾಗಿ ಆರೋಗ್ಯಕಾರಿ ಹವ್ಯಾಸಗಳು ರೂಢಿಯಾಗಿರಬೇಕು. ವೈಯಕ್ತಿಕವಾಗಿ ಆರೋಗ್ಯಕಾರಿ ಹವ್ಯಾಸ ಉಳ್ಳವರು ತಂಡದ ರಚನೆಯನ್ನು ಮಾಡಿಕೊಳ್ಳುವಾಗಲೂ ಅಂತಹ ಆರೋಗ್ಯಕಾರಿ ಹವ್ಯಾಸ ಇರುವ ಗೆಳೆಯರನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಈ ರೀತಿಯ ತಂಡಗಳು ಬಂಡಕೋರ ಪ್ರವೃತ್ತಿಯದ್ದಾಗುವುದಿಲ್ಲ. ಬದಲು ರಚನಾತ್ಮಕ ಚಟುವಟಿಕೆಗಳಿಗೆ ತೊಡಗುತ್ತವೆ. ರಚನಾತ್ಮಕ ಚಟುವಟಿಕೆಗಳಿಗೆ ಸಾಮಾಜಿಕ ನೆಲೆಯಲ್ಲಿ ನೈತಿಕ ಸ್ಥೆರ್ಯವು ದೊರೆಯುವುದರಿಂದ ತಂಡದಲ್ಲಿ ಅಸಮಧಾನವು ಹೊರಟು ಹೋಗಿ ಉತ್ಸಾಹ ಮತ್ತು ಲವಲವಿಕೆಗಳು ಕಾಣಿಸಿಕೊಳ್ಳುತ್ತವೆ. ವ್ಯಕ್ತಿತ್ವದ ವಿಕಾಸಕ್ಕೆ ಅನುಕೂಲವಾಗುತ್ತದೆ.