ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಕುರಿತು ಪಕ್ಷದಲ್ಲಿ ಚರ್ಚೆಯಾಗಿ ತೀರ್ಮಾನವಾಗಬೇಕು. ನನ್ನ ಮುಂದೆ ಸದ್ಯಕ್ಕೆ ಯಾವುದೇ ಪ್ರಸ್ತಾವನೆಯಿಲ್ಲ. ಪಕ್ಷದವರು ನೋಡಿ ಪರಾಮರ್ಶೆ ನಡೆಸಿ ವರದಿಯನ್ನು ನೀಡುತ್ತಾರೆ. ಅದರ ಆಧಾರದ ಮೇಲೆ ಸಚಿವ ಸಂಪುಟ ವಿಸ್ತರಣೆ ಕುರಿತು ತೀರ್ಮಾನವಾಗಲಿದೆ ಎಂದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಿಜೆಪಿ ಕಚೇರಿಯಲ್ಲಿ ಬಿಬಿಎಂಪಿ ವಿಚಾರವಾಗಿ ಸಭೆ ನಡೆಸಲಾಗಿದೆ ಎಂದರು.
ರಾಜ್ಯದಲ್ಲಿ ಕೋವಿಡ್ ಸೋಂಕು ಯಾವ ರೀತಿ ಮುಂದುವರಿಯುತ್ತಿದೆ, ಸ್ಥಿತಿಗತಿಯೇನು ಎಂದು ನೋಡಿಕೊಂಡು ಮುಂದಿನ ತೀರ್ಮಾನಗಳನ್ನು ಮಾಡುತ್ತೇವೆ. ಕೋವಿಡ್ ಸೋಂಕಿನ ಅಧ್ಯಯನ ಮಾಡಿ ತೀರ್ಮಾನ ಮಾಡಲಾಗುವುದು ಎಂದು ತಿಳಿಸಿದರು.
ಈ ಬಾರಿ ಮಂಡನೆಯಾಗಲಿರುವ ಬಜೆಟ್ ಗೆ ಪೂರ್ವತಯಾರಿ ಆರಂಭವಾಗಿದ್ದು ಡಿಸೆಂಬರ್ ತಿಂಗಳಲ್ಲಿ ಹಣಕಾಸು ಮತ್ತು ಆದಾಯ ಬರುವ ಇಲಾಖೆಗಳ ಜೊತೆಗೆ ಸಭೆ ನಡೆಸಿದ್ದೇನೆ. ಯೋಜನೆಗಳು, ಅಭಿವೃದ್ಧಿ ವಿಚಾರವಾಗಿ ಚರ್ಚೆ ಮಾಡಿದ್ದೇನೆ. ಡಿಸೆಂಬರ್ ಅಂತ್ಯದಿಂದ ಕೋವಿಡ್ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ನಾಳೆ ಇನ್ನೊಂದು ಸಭೆಯನ್ನು ಹಣಕಾಸು ಇಲಾಖೆ ಜೊತೆ ನಡೆಸುತ್ತಿದ್ದೇನೆ. ನಂತರ ಎಲ್ಲಾ ಇಲಾಖೆಗಳೊಂದಿಗೆ ಸಭೆ ಮಾಡಿ ಚರ್ಚಿಸಿ ಬಜೆಟ್ ಮಂಡನೆಗೆ ಬೇಕಾದ ತಯಾರಿ ಮಾಡಿಕೊಳ್ಳಲಾಗುವುದು ಎಂದರು.
ಕುಂದಾನಗರಿ ಬೆಳಗಾವಿಯಲ್ಲಿ ಬಿಜೆಪಿ ನಾಯಕರು ಸೇರಿ ಸಭೆ ನಡೆಸಿದ್ದಾರೆ, ಜಾರಕಿಹೊಳಿ ಬ್ರದರ್ಸ್ ನ್ನು ದೂರವಿಟ್ಟಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಈ ಬಗ್ಗೆ ನನಗೆ ಗೊತ್ತಿಲ್ಲ, ಹಲವಾರು ಸಂದರ್ಭಗಳಲ್ಲಿ ನಾಯಕರು ಸೇರಿ ಸಭೆ ನಡೆಸುವುದು ಸಾಮಾನ್ಯ, ಅದನ್ನು ನೀವು ಮಾಧ್ಯಮಗಳು ವೈಭವೀಕರಿಸಿ ಗೊಂದಲ ಸೃಷ್ಟಿ ಮಾಡುವ ಅಗತ್ಯವಿಲ್ಲ. ಬಿಜೆಪಿ ನಾಯಕರು, ವಿರೋಧ ಪಕ್ಷದವರೂ ಹಲವಾರು ಬಾರಿ ಒಂದೆಡೆ ಸೇರುತ್ತಾರೆ, ಚರ್ಚೆ ಮಾಡುತ್ತಾರೆ. ಅದರಲ್ಲೇನಿದೆ ವಿಶೇಷ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಕೇಳಿದರು.
ಈಗ ನಾಲ್ಕು ಸಚಿವ ಸ್ಥಾನಗಳು ತೆರವಿದೆ. ಸಹಜವಾಗಿ ಆಕಾಂಕ್ಷಿಗಳು ಸಚಿವರಾಗಬೇಕೆಂದು ಬಯಸುವುದು ಸಹಜ.ಸಚಿವ ಸಂಪುಟ ವಿಸ್ತರಣೆ ಯಾವಾಗ, ಯಾವ ರೀತಿ ಮಾಡಬೇಕೆನ್ನುವುದು ಪಕ್ಷದ ವರಿಷ್ಠರ ಗಮನದಲ್ಲಿದ್ದು, ವರಿಷ್ಠರು ಕರೆದು ಮಾತನಾಡುವ ಸಂದರ್ಭದಲ್ಲಿ ನಾನು ಎಲ್ಲ ವಿವರಗಳನ್ನು ನೀಡುತ್ತೇನೆ ಎಂದರು.
6 ತಿಂಗಳ ಸಾಧನೆ ಪುಸ್ತಕ ರೂಪದಲ್ಲಿ ಬಿಡುಗಡೆ: ಬಸವರಾಜ ಬೊಮ್ಮಾಯಿಯವರು ಕರ್ನಾಟಕದ 23ನೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡದ್ದು ಕಳೆದ ವರ್ಷ 2021ರ ಜುಲೈ 28ರಂದು. ನಾಡಿದ್ದು 28ಕ್ಕೆ 6 ತಿಂಗಳಾಗುತ್ತಿದೆ. ಅಂದೇ ಅವರ 61ನೇ ಹುಟ್ಟುಹಬ್ಬ ಕೂಡ.ಹೀಗಾಗಿ ಕಳೆದ 6 ತಿಂಗಳಲ್ಲಿ ಅವರ ನೇತೃತ್ವದ ಸರ್ಕಾರದಲ್ಲಿ ಮಾಡಿರುವ ಕೆಲಸ, ಸಾಧನೆಗಳನ್ನು ಪುಸ್ತಕ ರೂಪದಲ್ಲಿ ಹೊರತರಲಾಗುವುದು ಎಂದರು.