ಬೆಂಗಳೂರು(Bengaluru): ಮೊಬೈಲ್ ಕೊಡಿಸದಿಲ್ಲವೆಂಬ ಕಾರಣಕ್ಕೆ ತನ್ನ ತಾಯಿಯನ್ನು ಮಗನೇ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಬೇಗೂರಿನ ಮೈಲಸಂದ್ರದಲ್ಲಿ ನಡೆದಿದೆ.
ತಾಯಿ ಫಾತಿಮಾ ಮೇರಿ ಪುತ್ರನಿಂದಲೇ ಕೊಲೆಯಾದವರು. ದೀಪಕ್ ಎಂಬುವವನೇ ಹತ್ಯೆಗೈದ ಮಗ.
ಕಳೆದ ವಾರದಿಂದ ಮೊಬೈಲ್ ಕೊಡಿಸುವಂತೆ ತಾಯಿ ಫಾತಿಮಾ ಮೇರಿಗೆ ದೀಪಕ್ ಒತ್ತಾಯಿಸುತ್ತಿದ್ದ.
ಈ ನಡುವೆ ಗುರುವಾರ ಕೂಡ ಮೊಬೈಲ್ ಕೊಡಿಸುವಂತೆ ತಾಯಿ ಜತೆ ಜಗಳವಾಡಿದ್ದ. ದುಡ್ಡಿಲ್ಲವೆಂದು ಮೊಬೈಲ್ ಕೊಡಿಸಲು ತಾಯಿ ಫಾತಿಮಾ ಮೇರಿ ನಿರಾಕರಿಸಿದ್ದರು. ಇದರಿಂದ ಕೋಪಗೊಂಡ ಪುತ್ರ ದೀಪಕ್ ತಾಯಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ಈ ಸಂಬಂಧ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.