ನವದೆಹಲಿ: NEET UG 2026 ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪಗಳ ಬೆನ್ನಲ್ಲೇ, ಮರುಪರೀಕ್ಷೆಯ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಟೆಲಿಗ್ರಾಮ್ ಆ್ಯಪ್ ಬಳಕೆಗೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಪರೀಕ್ಷಾ ಭದ್ರತೆ ಹಾಗೂ ವಂಚನೆ ತಡೆಗಟ್ಟುವ ಉದ್ದೇಶದಿಂದ ಕೇಂದ್ರ ಸರ್ಕಾರ ಕೆಲವು ಕಠಿಣ ಕ್ರಮಗಳನ್ನು ಕೈಗೊಂಡಿದೆ ಎಂದು ವರದಿಗಳು ತಿಳಿಸಿವೆ.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಬಿಡುಗಡೆ ಮಾಡಿರುವ ಪ್ರಕಟಣೆಯ ಪ್ರಕಾರ, ಟೆಲಿಗ್ರಾಮ್ ಮೂಲಕ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದು, ನಕಲಿ ಪ್ರಶ್ನೆ ಪತ್ರಿಕೆಗಳು, ಎಡಿಟ್ ಮಾಡಲಾದ ಸ್ಕ್ರೀನ್‌ಶಾಟ್‌ಗಳು ಹಾಗೂ ಪರೀಕ್ಷೆಯಲ್ಲಿ ಯಶಸ್ಸಿನ ಭರವಸೆ ನೀಡಿ ವಿದ್ಯಾರ್ಥಿಗಳನ್ನು ವಂಚಿಸುವ ಚಟುವಟಿಕೆಗಳು ನಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಕೈಗೊಂಡಿರುವ ಕ್ರಮಗಳೇನು?
ಈ ಸಂಬಂಧ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಎರಡು ಪ್ರಮುಖ ನಿರ್ದೇಶನಗಳನ್ನು ನೀಡಿದೆ ಎಂದು ತಿಳಿಸಲಾಗಿದೆ.
- ಜೂನ್ 22ರವರೆಗೆ ಭಾರತದಲ್ಲಿ ಟೆಲಿಗ್ರಾಮ್ ಸೇವೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ ಎಂದು ವರದಿಯಾಗಿದೆ. ಈ ಅವಧಿಯಲ್ಲಿ ಪರೀಕ್ಷೆ ಮತ್ತು ಅದರ ನಂತರದ ಪ್ರಕ್ರಿಯೆಗಳು ನಡೆಯಲಿವೆ.
- ಜೂನ್ 30ರವರೆಗೆ ಈಗಾಗಲೇ ಪ್ರಕಟವಾಗಿರುವ ಸಂದೇಶಗಳನ್ನು Edit ಮಾಡುವ ಸೌಲಭ್ಯವನ್ನು ಟೆಲಿಗ್ರಾಮ್ ನಿಷ್ಕ್ರಿಯಗೊಳಿಸುವಂತೆ ಸೂಚಿಸಲಾಗಿದೆ ಎಂದು ಹೇಳಲಾಗಿದೆ.
ಟೆಲಿಗ್ರಾಮ್ ಮೇಲೆ ನಿಗಾ ಏಕೆ?
ಎನ್‌ಟಿಎ ಮಾಹಿತಿ ಪ್ರಕಾರ, ಸಂಘಟಿತ ವಂಚನಾ ಜಾಲಗಳು ಮತ್ತು ಸೈಬರ್ ವಂಚಕರು ಟೆಲಿಗ್ರಾಮ್ ವೇದಿಕೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಆರೋಪಗಳ ಹಿನ್ನೆಲೆಯಲ್ಲಿ ಹಲವು ತಿಂಗಳುಗಳಿಂದ ನಿಗಾ ವಹಿಸಲಾಗುತ್ತಿತ್ತು.

“ಪೇಪರ್ ಲೀಕ್ಡ್ ನೀಟ್”, “ರೀ-ನೀಟ್ 2026”, “ಖಾಸಗಿ ಮಾಫಿಯಾ” ಮತ್ತು “ರೀ ನೀಟ್ ಮಾಫಿಯಾ” ಮುಂತಾದ ಹೆಸರಿನ ಚಾನೆಲ್‌ಗಳ ಮೂಲಕ ಪ್ರಶ್ನೆ ಪತ್ರಿಕೆ ದೊರೆಯುತ್ತದೆ ಎಂದು ಜಾಹೀರಾತು ನೀಡಿ, ಅಭ್ಯರ್ಥಿಗಳು ಹಾಗೂ ಅವರ ಕುಟುಂಬಗಳಿಂದ ಸಾವಿರಗಳಿಂದ ಲಕ್ಷಾಂತರ ರೂಪಾಯಿವರೆಗೆ ಹಣ ವಸೂಲಿ ಮಾಡುವ ಪ್ರಯತ್ನ ನಡೆದಿರುವ ಬಗ್ಗೆ ಎನ್‌ಟಿಎ ಗಮನಕ್ಕೆ ಬಂದಿದೆ ಎಂದು ತಿಳಿಸಲಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಎನ್‌ಟಿಎ, ಅಧಿಕೃತ ಪರೀಕ್ಷಾ ವ್ಯವಸ್ಥೆಯ ಹೊರತಾಗಿ ಯಾವುದೇ ಪ್ರಶ್ನೆ ಪತ್ರಿಕೆ ಲಭ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದು, ಇಂತಹ ವಂಚಕರ ಬಲೆಗೆ ಬೀಳದಂತೆ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಎಚ್ಚರಿಕೆ ನೀಡಿದೆ.
















