ಚಾಮರಾಜನಗರ: ನಾನು ರಾಜಕೀಯದ ಕೊನೆಗಾಲದಲ್ಲಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮರಾಜನಗರದಲ್ಲಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಕೊಳ್ಳೇಗಾಲ ತಾಲೂಕಿನ ಸತ್ತೇಗಾಲದಲ್ಲಿ ಸರ್ಕಾರಿ ಶಾಲಾ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾನೀಗ ರಾಜಕೀಯದ ಕೊನೆಗಾಲದಲ್ಲಿದ್ದೇನೆ. ಜನರ ಪ್ರೀತಿ, ಅಭಿಮಾನ ಗಳಿಸದಿದ್ದರೆ ರಾಜಕೀಯದಲ್ಲಿ ಉಳಿಗಾಲವಿಲ್ಲ ಎಂದರು.
ಚಾಮರಾಜನಗರಕ್ಕೆ ಹೋದರೆ ಅಧಿಕಾರ ಕಳೆದುಕೊಳ್ಳುತ್ತೀರಿ ಎಂದಿದ್ದರು. ಜೆ.ಹೆಚ್.ಪಟೇಲರಿಗೆ ಆಗಿನ ಕೆಲ ಶಾಸಕರು ಹೇಳಿದ್ದರು. ಪಾಪ ಆಗಿನಿಂದ ಆ ಕಳಂಕ ಚಾಮರಾಜನಗರ ಮೇಲಿದೆ. ನಾನು 2ನೇ ಬಾರಿ ಮುಖ್ಯಮಂತ್ರಿಯಾಗಿ ಚಾಮರಾಜನಗರಕ್ಕೆ ಬಂದಿದ್ದೇನೆ. ಈ ಮೂಢನಂಬಿಕೆಯನ್ನು ಅವರು ನಂಬಿರಲಿಲ್ಲ, ನಾನೂ ನಂಬಲಿಲ್ಲ ಎಂದರು.
ಚಾಮರಾಜನಗರಕ್ಕೆ ಬಂದು ಹೊಸ ಜಿಲ್ಲೆ ಗೋಷಣೆ ಮಾಡಿದ್ದೆವು. ಆಗ ನಾನು ಉಪ ಮುಖ್ಯಮಂತ್ರಿಯಾಗಿದ್ದೆ. ನಾವು ಚಾಮರಾಜನಗರಕ್ಕೆ ಬಂದು ಜಿಲ್ಲೆಯನ್ನು ಘೋಷಣೆ ಮಾಡಿದ್ದು. ನಾನು ಏನಿಲ್ಲ ಅಂದರೂ 20 ಬಾರಿ ಚಾಮರಾಜನಗರಕ್ಕೆ ಬಂದಿದ್ದೇನೆ. ನಾನು ಚಾಮರಾಜನಗರಕ್ಕೆ ಬಂದಾಗಲೆಲ್ಲ ಅಧಿಕಾರ ಕಳೆದುಕೊಳ್ಳುವ ಬದಲು ಸಿಎಂ ಕುರ್ಚಿ ಗಟ್ಟಿಯಾಗಿದೆ ಎಂದರು.
ಅತ್ಯಂತ ಉತ್ಸಾಹದಿಂದ ನಾನು ಶಾಲೆಯನ್ನು ಉದ್ಘಾಟನೆ ಮಾಡಿದ್ದೇನೆ. ಜಾನಪದ ಕಲೆಗಳ ತವರೂರು ಹಾಗೂ ದಕ್ಷಿಣದ ಗಡಿ ಈ ಚಾಮರಾಜನಗರ ಎಂದು ಸಿಎಂ ಬಣ್ಣಿಸಿದರು.