ಫಿಫಾ ವಿಶ್ವಕಪ್ನ ಎರಡನೇ ದಿನವಾದ ಶುಕ್ರವಾರ, ಸಹ-ಆತಿಥೇಯ ಕೆನಡಾ ಮತ್ತು ಬೋಸ್ನಿಯಾ ತಂಡಗಳು ಮುಖಾಮುಖಿ ಆಗಿದ್ದವು ಆದರೆ ಈ ಎರಡೂ ತಂಡಗಳಿಗೆ ಪಂದ್ಯ ಗೆಲ್ಲಲು ಸಾಧ್ಯವಾಗಲಿಲ್ಲ. ಕೆನಡಾ ಮತ್ತು ಬೋಸ್ನಿಯಾ ತಲಾ 1 ಗೋಲು ಕಲೆಹಾಕಿದ್ದರಿಂದ ಪಂದ್ಯ ಡ್ರಾನಲ್ಲಿ ಕೊನೆಗೊಂಡಿದೆ. 1986 ಮತ್ತು 2022ರ ಪಂದ್ಯಾವಳಿಗಳ ನಡುವೆ ಆರು ಸೋಲುಗಳನ್ನು ಅನುಭವಿಸಿದ ಕೆನಡಾ, ಈ ಡ್ರಾ ಮೂಲಕ ವಿಶ್ವಕಪ್ ಇತಿಹಾಸದಲ್ಲಿ ಮೊದಲ ಪಾಯಿಂಟ್ ಕಲೆಹಾಕಿತು. ಕೆನಡಾವನ್ನು ಸೋಲಿನಿಂದ ರಕ್ಷಿಸಿದ ಸಂಪೂರ್ಣ ಕ್ರೆಡಿಟ್ ಬದಲಿ ಆಟಗಾರ ಸೈಲ್ ಲಾರಿನ್ ಅವರಿಗೆ ಸಲ್ಲುತ್ತದೆ, ಅವರು ಮೈದಾನಕ್ಕೆ ಬಂದ ಕೆಲವೇ ನಿಮಿಷಗಳಲ್ಲಿ ಗೋಲು ಗಳಿಸುವ ಮೂಲಕ ಕೆನಡಾವನ್ನು ಸೋಲಿನಿಂದ ಪಾರು ಮಾಡಿದರು ಮತ್ತು ಸ್ಕೋರ್ ಅನ್ನು ಸಮಗೊಳಿಸಿದರು ಎನ್ನಲಾಗುತ್ತಿದೆ.

ಹಾಗೂ ಟೊರೊಂಟೊ ಕ್ರೀಡಾಂಗಣದಲ್ಲಿ ಕಿಕ್ಕಿರಿದ ತವರಿನ ಪ್ರೇಕ್ಷಕರ ಮುಂದೆ ಆಟವಾಡುತ್ತಿದ್ದ ಕೆನಡಾ, ಮೊದಲಾರ್ಧದಲ್ಲಿ ಹಿನ್ನಡೆ ಸಾಧಿಸಿತ್ತು ಇದರೊಂದಿಗೆ ಫಿಫಾ ವಿಶ್ವಕಪ್ನಲ್ಲಿ ಸತತ 7ನೇ ಸೋಲಿನತ್ತ ಸಾಗುತ್ತಿತ್ತು. ಆದರೆ 76ನೇ ನಿಮಿಷದಲ್ಲಿ ಬದಲಿ ಪ್ಲೇಯರ್ ಆಗಿ ಮೈದಾನಕ್ಕಿಳಿದ ಲಾರಿನ್ ಉತ್ತಮ ಪ್ರದರ್ಶನ ನೀಡಿದರು. ಕಣಕ್ಕಿಳಿದ ಕೇವಲ ಎರಡು ನಿಮಿಷಗಳ ನಂತರ ಅವರು ಕೆನಡಾ ಪರ ಗೋಲು ಗಳಿಸುವಲ್ಲಿ ಯಶಸ್ವಿ ಆದರು. ಇದರೊಂದಿಗೆ ಕೆನಡಾ ಫ್ಯಾನ್ಸ್ಗಳ ಸಂಭ್ರಮಾಚರಣೆಗೆ ಕಾರಣರಾದರು. ಕೆನಡಾದ ಫುಟ್ಬಾಲ್ಗೆ ಈ ಗೋಲು ಮಹತ್ವದ ಕ್ಷಣವಾಗಿತ್ತು, ಏಕೆಂದರೆ ಇದು ತವರಿನ ನೆಲದಲ್ಲಿ ದೇಶದ ಮೊದಲ ವಿಶ್ವಕಪ್ ಗೋಲಾಗಿತ್ತು.

ಏತನ್ಮಧ್ಯೆ, ಬೋಸ್ನಿಯಾ 21ನೇ ನಿಮಿಷದಲ್ಲಿ ತಮ್ಮ ಮೊದಲ ಗೋಲ್ ಗಳಿಸುವ ಮೂಲಕ ಕೆನಡಾ ವಿರುದ್ಧ ಮುನ್ನಡೆ ಸಾಧಿಸಿತು. ಜೊವೊ ಲುಕಿಕ್ ಕಾರ್ನರ್ನಿಂದ ಫ್ಲಿಕ್-ಆನ್ ಅನ್ನು ಗೋಲಾಗಿ ಪರಿವರ್ತಿಸಿ ತಮ್ಮ ಮೊದಲ ಅಂತರರಾಷ್ಟ್ರೀಯ ಗೋಲು ಗಳಿಸಿದರು. ಬೋಸ್ನಿಯಾ ಜೂನ್ 18 ರಂದು ಲಾಸ್ ಏಂಜಲೀಸ್ನಲ್ಲಿ ನಡೆಯಲಿರುವ ತನ್ನ ಮುಂದಿನ ಪಂದ್ಯದಲ್ಲಿ ಗ್ರೂಪ್ ಫೇವರಿಟ್ ಎನಿಸಿಕೊಂಡಿರುವ ಸ್ವಿಟ್ಜರ್ಲ್ಯಾಂಡ್ ವಿರುದ್ಧ ಸೆಣಸಲಿದೆ, ಇದೇ ದಿನ ಕೆನಡಾ ತಂಡ ವ್ಯಾಂಕೋವರ್ನಲ್ಲಿ ಕತಾರ್ ವಿರುದ್ಧ ಸೆಣಸಲಿದೆ. ಈ ಎರಡೂ ತಂಡಗಳು ಗ್ರೂಪ್ ಬಿ ನಲ್ಲಿವೆ ಎಂಬುದ್ದಾಗಿದೆ.
















