ಧಾರವಾಡ: ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ್ದ ಅಪ್ರಾಪ್ತ ಬಾಲಕಿಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ದೊಡ್ಡದೊಂದು ಬ್ರೇಕಿಂಗ್ ಸುದ್ದಿ ಹೊರಬಿದ್ದಿದೆ. ಪ್ರಕರಣದಲ್ಲಿ ತೀವ್ರ ಕರ್ತವ್ಯ ಲೋಪ ಹಾಗೂ ಬೇಜವಾಬ್ದಾರಿ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಗರಗ ಪೊಲೀಸ್ ಇನ್ಸ್‌ಪೆಕ್ಟರ್ (ಸಿಪಿಐ) ಶಿವಯೋಗಿ ಲೋಹಾರ್ ಅವರನ್ನು ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಗುಂಜನ್ ಆರ್ಯ ಅವರು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ (ಸಸ್ಪೆಂಡ್) ಆದೇಶ ಹೊರಡಿಸಿದ್ದು ಕಳೆದ ಮೇ 8ರಂದು ಗರಗ ಗ್ರಾಮದ ಪೂರ್ಣಿಮಾ ವಡ್ಡರ್ ಎಂಬ ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಘಟನೆಯನ್ನು ‘ಲವ್ ಜಿಹಾದ್’ ಪ್ರಕರಣ ಎಂದು ಗಂಭೀರವಾಗಿ ಆರೋಪಿಸಲಾಗಿತ್ತು. ಕಾನೂನು ಪ್ರಕಾರ ಇಂತಹ ಸೂಕ್ಷ್ಮ ಪ್ರಕರಣ ಎದುರಾದಾಗ ತಕ್ಷಣವೇ ಪೋಕ್ಸೋ ಕಾಯ್ದೆಯಡಿ ಕಠಿಣ ಮೊಕದ್ದಮೆ ದಾಖಲಿಸಿಕೊಳ್ಳಬೇಕಿತ್ತು ಎನ್ನಲಾಗುತ್ತಿದೆ.

ಆದರೆ, ಇನ್ಸ್‌ಪೆಕ್ಟರ್ ಶಿವಯೋಗಿ ಲೋಹಾರ್ ಅವರು ಕಾನೂನು ಕ್ರಮ ಕೈಗೊಳ್ಳುವ ಬದಲಾಗಿ, ಪ್ರಕರಣವನ್ನು ಅಲ್ಲಿಗೇ ಮುಚ್ಚಿಹಾಕಲು ಉಭಯ ಪಕ್ಷಗಳ ನಡುವೆ ‘ರಾಜಿ ಸಂಧಾನ’ ಮಾಡಿಸಿದ್ದರು ಎಂಬ ಆಘಾತಕಾರಿ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲದೆ, ಕೇಸ್ ದಾಖಲಿಸುವುದರಲ್ಲೂ ತೀವ್ರ ವಿಳಂಬ ಧೋರಣೆ ಅನುಸರಿಸಿದ್ದರು ಎನ್ನಲಾಗಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಅವರ ಈ ವಿಳಂಬ ನೀತಿ ಮತ್ತು ರಾಜಿ ಸಂಧಾನದ ನಡೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ನಿನ್ನೆ ಶುಕ್ರವಾರ ಬಜರಂಗದಳದ ಕಾರ್ಯಕರ್ತರು ಬೀದಿಗಿಳಿದು, ಕರ್ತವ್ಯ ಲೋಪ ಎಸಗಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲೇಬೇಕು ಎಂದು ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಿದ್ದರು.

ಈ ಕುರಿತು ಬಜರಂಗದಳದ ಈ ತೀವ್ರ ಹೋರಾಟ ಮತ್ತು ಸಾರ್ವಜನಿಕರ ಒತ್ತಡಕ್ಕೆ ಮಣಿದ ಇಲಾಖೆ, ಪ್ರತಿಭಟನೆ ನಡೆದ ಬೆನ್ನಲ್ಲೇ ಇಂದು ಶನಿವಾರ ಸಿಪಿಐ ಶಿವಯೋಗಿ ಲೋಹಾರ್ ಅವರನ್ನು ಸಸ್ಪೆಂಡ್ ಮಾಡಿ ಆದೇಶಿಸಿದೆ. ಸದ್ಯ ಇನ್ಸ್‌ಪೆಕ್ಟರ್ ಅಮಾನತು ಬೆನ್ನಲ್ಲೇ ಬಾಲಕಿಯ ಆತ್ಮಹತ್ಯೆ ಹಾಗೂ ಲವ್ ಜಿಹಾದ್ ಆರೋಪದ ಕುರಿತು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಲಾಗಿದ್ದು, ಹೆಚ್ಚಿನ ಸತ್ಯಾಸತ್ಯತೆಗಳನ್ನು ಹೊರತರಲು ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ ಎಂಬುದ್ದಾಗಿದೆ.
















