ಬೆಂಗಳೂರು: 2021-22ನೇ ಸಾಲಿನ ದ್ವಿತೀಯ ಪರೀಕ್ಷೆಗಳ ಫಲಿತಾಂಶವು ಇದೇ ತಿಂಗಳ ಜೂನ್ 20 ರಿಂದ 25ರೊಳಗೆ ಪ್ರಕಟವಾಗಲಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.
ಜೂನ್ 15 ಕ್ಕೆ ಫಲಿತಾಂಶ ಪ್ರಕಟಿಸುವ ನಿರೀಕ್ಷೆಯಿತ್ತು ಆದರೆ ನೋಂದಣಿ ಮಾಡಿದ ಪ್ರಾಧ್ಯಾಪಕರು ಪೂರ್ಣ ಪ್ರಮಾಣದಲ್ಲಿ ಮೌಲ್ಯಮಾಪನದಲ್ಲಿ ಪಾಲ್ಗೊಳ್ಳದ ಹಿನ್ನೆಲೆ ಫಲಿತಾಂಶ ತಡವಾಗಲಿದೆ ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.
ರಾಜ್ಯದಾದ್ಯಂತ 1076 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಯು ಏ. 22 ರಿಂದ ಆರಂಭವಾಗಿ ಮೇ. 18 ಕ್ಕೆ ಮುಗಿದಿತ್ತು. 6.84 ಲಕ್ಷ ವಿದ್ಯಾರ್ಥಿಗಳು ಪಿಯುಸಿ ಪರೀಕ್ಷೆಗೆ ಹಾಜರಾಗಿದ್ದಾರೆ. ಇದರಲ್ಲಿ 3.46 ಲಕ್ಷ ಬಾಲಕರು, 3.37 ಲಕ್ಷ ಬಾಲಕಿಯರು ಪರೀಕ್ಷೆ ಬರೆದಿದ್ದಾರೆ.
ಇದರಲ್ಲಿ 6 ಲಕ್ಷ ವಿದ್ಯಾರ್ಥಿಗಳಷ್ಟೇ ರೆಗ್ಯುಲರ್ ವಿದ್ಯಾರ್ಥಿಗಳಾಗಿದ್ದು, 61 ಸಾವಿರ ವಿದ್ಯಾರ್ಥಿಗಳು ಪುನರಾವರ್ತಿತ ವಿದ್ಯಾರ್ಥಿಗಳಾಗಿದ್ದಾರೆ. ಕಟ್ಟುನಿಟ್ಟಿನ ಕ್ರಮಗಳೊಂದಿಗೆ ಫಲಿತಾಂಶ ಸೋರಿಕೆಯಾಗದಂತೆ ಕಟ್ಟೆಚ್ಚರ ವಹಿಸಲು ಶಿಕ್ಷಣ ಸಚಿವರು ಸೂಚಿಸಿದ್ದಾರೆ.