ಬೆಳಗಾವಿ(Belagavi): ಜಿಲ್ಲೆಯ ನಿಪ್ಪಾಣಿ ನಗರದ ಮತಗಟ್ಟೆಯೊಂದರ ಮತಪೆಟ್ಟಿಗೆಯಲ್ಲಿ ಒಂದು ಮತ ಕಡಿಮೆ ಬಂದಿದ್ದು, ಗೊಂದಲಕ್ಕೆ ಕಾರಣವಾಗಿದೆ.
ನಿಪ್ಪಾಣಿಯ ಮತಗಟ್ಟೆಯಲ್ಲಿ 595 ಮತದಾನವಾಗಿದೆ. ಆದರೆ, ಅಲ್ಲಿಂದ ತಂದ ಮತಪೆಟ್ಟಿಗೆಯಲ್ಲಿ 594 ಮತಗಳು ಇವೆ. ಸಿಬ್ಬಂದಿ ನಾಲ್ಕು ಬಾರಿ ಎಣಿಕೆ ಮಾಡಿದರೂ ಸಂಖ್ಯೆ ಸರಿಹೊಂದಲಿಲ್ಲ.
ಇದರಿಂದ ಪದವೀಧರ ಕ್ಷೇತ್ರದ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಚುನಾವಣಾ ಸಿಬ್ಬಂದಿ ಮುಂದೆ ತಕರಾರು ತೆಗೆದರು. ಪರಿಣಾಮ ಮತಎಣಿಕೆಗೆ ಕೆಲ ಸಮಯ ತಡೆ ಬಿದ್ದಿತು.
ಮತಪೆಟ್ಟಿಗೆ ಮೇಲಿನ ಬಟ್ಟೆ ಬದಲಾವಣೆ:
ವಾಯವ್ಯ ಶಿಕ್ಷಕರ ಕ್ಷೇತ್ರದ ಮತದ ಮತ ಪೆಟಿಗೆಯೊಂದಕ್ಕೆ ಕಟ್ಟಿದ್ದ ಬಟ್ಟೆ ಬದಲಾಗಿದ್ದರಿಂದ ಜೆಡಿಎಸ್ ಅಭ್ಯರ್ಥಿ ಪರ ಏಜೆಂಟರು ತಕರಾರು ಮಾಡಿದರು.ಶೀಲ್ ಮಾಡುವಾಗ ಒಂದು ಬಣ್ಣದ ಬಟ್ಟೆ ಇತ್ತು. ಅದನ್ನು ತೆರೆಯುವಾಗ ಇನ್ನೊಂದು ಬಣ್ಣದ್ದು ಇದೆ. ಇದಕ್ಕೆ ಕಾರಣ ಏನು ಎಂದು ಚುನಾವಣಾಧಿಕಾರಿ ಉತ್ತರ ನೀಡಬೇಕು ಎಂದು ಪಟ್ಟು ಹಿಡಿದರು.
ಸ್ಥಳಕ್ಕೆ ಬಂದ ಚುನಾವಣಾಧಿಕಾರಿ ಆಮ್ಲಾನ್ ಆದಿತ್ಯ ಬಿಸ್ವಾಸ್, ಬಟ್ಟೆ ಕಟ್ಟುವುದಷ್ಟೇ ಶೀಲ್ ಅಲ್ಲ. ಅದರ ಒಳಗೆ ಬ್ಯಾಲೆಟ್ ಪೇಪರ್ ಮೇಲೆ ಶೀಲ್ ಇರುತ್ತದೆ. ಇದನ್ನು ವ್ಯತ್ಯಾಸ ಮಾಡಲು ಸಾಧ್ಯವಿಲ್ಲ. ನೀವೇ ನೋಡಿ ಎಂದು ತೋರಿಸಿದರು. ಬಳಿಕ ಏಜೆಂಟರು ಶಾಂತರಾದರು.