ರಾಯಚೂರು : ಮಂತ್ರಾಲಯದಲ್ಲಿ ಗುರುರಾಘವೇಂದ್ರ ಸ್ವಾಮಿಗಳ 405ನೇ ಪಟ್ಟಾಭಿಷೇಕ ಮಹೋತ್ಸವ ಅದ್ದೂರಿಯಾಗಿ ನೆರವೇರಿದೆ. ಫೆ.18ರಿಂದ 24ರವರೆಗೆ ಏಳು ದಿನಗಳ ಕಾಲ ಮಂತ್ರಾಲಯದಲ್ಲಿ ನಡೆಯುತ್ತಿರುವ ಗುರುವೈಭವೋತ್ಸವ ಸಂಭ್ರಮದ ಮುಖ್ಯದಿನಗಳಲ್ಲಿ ಒಂದಾದ ಇಂದು ರಾಯರ ಪಾದುಕೆಗಳಿಗೆ ಪಟ್ಟಾಭಿಷೇಕ ಮಹೋತ್ಸವ ನೆರವೇರಿಸಲಾಯಿತು.
ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಶ್ರೀಗಳು ರಾಯರ ಮೂಲ ಪಾದುಕೆಗಳಿಗೆ ಪಟ್ಟಾಭಿಷೇಕ ನೆರವೇರಿಸಿದರು. ಬಳಿಕ ಮಠದ ಸ್ವರ್ಣ ರಥದಲ್ಲಿ ಪಾದುಕೆಗಳನ್ನಿಟ್ಟು ಅದ್ದೂರಿಯಾಗಿ ರಥೋತ್ಸವ ನೆರವೇರಿಸಲಾಯಿತು. ಪಟ್ಟಾಭಿಷೇಕ ಮಹೋತ್ಸವ ಹಿನ್ನೆಲೆ ರಾಯರ ಮೂಲವೃಂದಾವನಕ್ಕೆ ಅಭಿಷೇಕ, ರಾಯರ ಸಮಗ್ರಗ್ರಂಥಗಳ ಪಾರಾಯಣ, ಭಜನಾ ಮಂಡಳಿಗಳ ಸಾಮೂಹಿಕ ಭಜನೆ, ಪ್ರವಚನ, ರಾಯರ ಪಾದುಕೆಗಳ ಪೂಜೆ, ಮುತ್ತುರತ್ನಗಳಿಂದ ಅಭಿಷೇಕ, ಪುಷ್ಪವೃಷ್ಠಿ, ಫಲಸಮರ್ಪಣೆ, ಮಂಗಳಾರತಿ ಕಾರ್ಯಕ್ರಮಗಳು ನಡೆದವು.
ಫೆ.24ರಂದು ರಾಯರ 431ನೇ ಜನ್ಮದಿನವನ್ನ ವರ್ಧಂತಿ ಉತ್ಸವವಾಗಿ ಮಠದಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಈ ಏಳು ದಿನಕಾಲ ಧಾರ್ಮಿಕ ಕಾರ್ಯಕ್ರಮಗಳ ಜೊತೆ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಸನ್ಮಾನ ಮಾಡಲಾಗುತ್ತದೆ.















