ಬೆಂಗಳೂರು: ತುಮಕೂರಿನ ಇತಿಹಾಸವನ್ನು ನನ್ನಂಥವನು ಬದಲಾವಣೆ ಮಾಡಲು ಆಗುತ್ತಾ?. ಅಭಿವೃದ್ಧಿ ದೃಷ್ಟಿಯಿಂದ ಬೆಂಗಳೂರು ಉತ್ತರ ಮಾಡಿ ಅಂತ ಕೇಳಿರುವುದು ಅಷ್ಟೇ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದು ಸದಾಶಿವನಗರದ ಸರ್ಕಾರಿ ನಿವಾಸದಲ್ಲಿಂದು ತುಮಕೂರನ್ನು ಬೆಂಗಳೂರು ಉತ್ತರ ಮಾಡುವ ವಿಚಾರವಾಗಿ ಅವರು ಪ್ರತಿಕ್ರಿಯಿಸಿದರು ಎನ್ನಲಾಗುತ್ತಿದೆ. ಬೆಂಗಳೂರಿಗೆ ತುಮಕೂರನ್ನು ಸೇರಿಸುವುದು ಅಲ್ಲ. ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ತುಮಕೂರು ಜಿಲ್ಲೆಯ ಹೆಸರನ್ನು ಬದಲಾವಣೆ ಮಾಡಲಾಗುತ್ತಾ?. ತುಮಕೂರಿಗೆ ಅದರ ಇತಿಹಾಸ ಹಾಗೂ ಅಸ್ಮಿತೆ ಇದೆ. ಅದನ್ನು ನಾವು ಬದಲಾವಣೆ ಮಾಡಲು ಹೋಗುತ್ತೀವಾ? ಬಂಡವಾಳ ಹೂಡಿಕೆ ಸೇರಿದಂತೆ ಇತರೆ ಒಳಿತು ತುಮಕೂರಿಗೆ ಆಗುತ್ತದೆ ಎಂಬುದಷ್ಟೇ ನಮ್ಮ ಉದ್ದೇಶ.
ಬಿಜೆಪಿಯವರಿಗೆ ನಮ್ಮದೇನೂ ಅರ್ಥವೇ ಆಗೋದಿಲ್ಲ. ತುಮಕೂರಿನ ಬಗ್ಗೆ ಎಲ್ಲರಿಗೂ ಎಷ್ಟು ಸೆಂಟಿಮೆಂಟ್ಸ್ ಇದೆಯೋ ನನಗೂ ಅಷ್ಟೇ ಇದೆ. ಯಾಕೆಂದರೆ ನಾನು ಹುಟ್ಟಿ ಬೆಳೆದದ್ದು ಅಲ್ಲೇ. ನಾನು ನಿಮಗೂ ಕೂಡ ಈ ವಿಚಾರವಾಗಿ ಸ್ಪಷ್ಟೀಕರಣ ನೀಡಿದ್ದೇನೆ. ತುಮಕೂರಿನ ಹೆಸರು ಬದಲಾಗುವುದಿಲ್ಲ, ಆಡಳಿತ ಬದಲಾಗುವುದಿಲ್ಲ, ವಿಸ್ತೀರ್ಣ ಬದಲಾಗುವುದಿಲ್ಲ. ಬೆಂಗಳೂರಿಗೆ ಹತ್ತಿರ ಇರೋದ್ರಿಂದ ಬೆಂಗಳೂರು ಉತ್ತರಕ್ಕೆ ಸೇರಿಸಿ ಅಂತ ಕೇಳಿರೋದು ಅಷ್ಟೇ ಎಂದರು. ದೆಹಲಿಯ ಪಕ್ಕದಲ್ಲಿ ನೋಯ್ಡಾ ಇದೆ. ಅದೇ ರೀತಿ ಡೀಸೆಂಟ್ರಲೈಸ್ ಮಾಡುವ ಕಾರಣದಿಂದ ದೇಶಾದ್ಯಂತ ಈ ರೀತಿ ಕೆಲಸಗಳನ್ನು ಮಾಡಲಾಗಿದೆ. ತುಮಕೂರನ್ನು ಬೆಳೆಸಬಾರದಾ?. ತುಮಕೂರಿನಲ್ಲಿ 20,000 ಎಕರೆಯಲ್ಲಿ ಇಂಡಸ್ಟ್ರಿಯಲ್ ಹಬ್ ಮಾಡಲಾಗುತ್ತಿದೆ. ಅದು ನಂದೇ ಕ್ಷೇತ್ರದಲ್ಲಿ ಬರಲಿದ್ದು, ಎರಡು ಹಂತಗಳನ್ನು ಈಗಾಗಲೇ ಮುಗಿಸಲಾಗಿದೆ. ಏಷ್ಯಾದಲ್ಲಿ ಅತಿ ದೊಡ್ಡ ಇಂಡಸ್ಟ್ರಿಯಲ್ ಹಬ್ ಇದಾಗಲಿದೆ. ಜಪಾನ್ ಮೂಲದ ಒಂದು ದೊಡ್ಡ ಕಂಪನಿ ಕೂಡ ಈಗಾಗಲೇ ತಲೆಯೆತ್ತಿದೆ. ನಾವು ನಗರವನ್ನು ಬೆಳೆಸಬೇಕು ಎಂಬುದನ್ನು ಬಿಟ್ಟು ಹಾಗೆಯೇ ಹಿಂದುಳಿದು ಬಿಡಲಿ ಅಂತ ಬಿಡೋದು ಸರಿ ಹೋಗುವುದಿಲ್ಲ. ತುಮಕೂರು ಶಿಕ್ಷಣದ ಕೇಂದ್ರವಾಗಿದೆ. 9 ಇಂಜಿನಿಯರಿಂಗ್ ಹಾಗೂ 3 ಮೆಡಿಕಲ್ ಕಾಲೇಜುಗಳು ನಮ್ಮ ಜಿಲ್ಲೆಯಲ್ಲಿದ್ದಾವೆ. ಆ ವಿದ್ಯಾರ್ಥಿಗಳಿಗೆ ಅವಕಾಶಗಳು ಬೇಕಲ್ಲವೇ ಎಂದು ಹೇಳಿದರು. ಸಿಎಂ ಬದಲಾವಣೆ ವಿಚಾರದಲ್ಲಿ ರಾಜಣ್ಣ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಒಬ್ಬೊಬ್ಬರು ಒಂದೊಂದು ರೀತಿ ವ್ಯಾಖ್ಯಾನ ಮಾಡುತ್ತಾರೆ. ಒಬ್ಬೊಬ್ರು ಒಂದೊಂದು ವಿಶ್ಲೇಷಣೆ ಮಾಡುತ್ತಾರೆ. ಅದಕ್ಕೆಲ್ಲ ನಾನು ಪ್ರತಿಕ್ರಿಯೆ ಮಾಡುವುದು ಬರೋದಿಲ್ಲ. ನಾನೇನು ಸೈಲೆಂಟ್ ಆಗಿಲ್ಲ. ದಿನಾ ಟಾಂ ಟಾಂ ಹೊಡೆದುಕೊಂಡು ಹೋಗಲು ಆಗುತ್ತಾ?. ಪಕ್ಷದಲ್ಲಿ ಹೈಕಮಾಂಡ್ ಇದೆ, ಹೈಕಮಾಂಡ್ಗೆ ಯಾವ ಸಂದರ್ಭದಲ್ಲಿ ಏನು ಮಾಡಬೇಕು ಅಂತ ಗೊತ್ತಿದೆ. ಮಾಧ್ಯಮದ ಮೂಲಕ ನಾನೇನೋ ಆಗುವುದಕ್ಕೆ ಆಗುವುದಿಲ್ಲ.
ಹೈಕಮಾಂಡ್ ತೀರ್ಮಾನ ಮಾಡುತ್ತಾರೆ. ಅವರನ್ನು ಬದಲಾಯಿಸುವ ಹಾಗೂ ಮುಂದುವರಿಸುವ ಪ್ರಸ್ತಾವನೆ ಬಗ್ಗೆ ನಾವು ಚರ್ಚೆ ಮಾಡಿ ಏನಾಗುತ್ತೆ?. ನಮಗೆ ಗೊತ್ತಿರುವ ಹಾಗೆ ಯಾವುದನ್ನೂ ನಿಗದಿ ಮಾಡಿ ಮುಖ್ಯಮಂತ್ರಿಯನ್ನಾಗಿ ಮಾಡಿರುವುದಿಲ್ಲ ಎಂದು ತಿಳಿಸಿದರು. ಗೊಂದಲವನ್ನು ಯಾಕೆ ಹೈಕಮಾಂಡ್ ಬಗೆಹರಿಸುತ್ತಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಪ್ರಶ್ನೆಯೇ ಇಲ್ಲ ಅಂದರೆ ಅದಕ್ಕೆ ಕ್ಲಾರಿಫಿಕೇಶನ್ ಯಾಕೆ ಕೊಡುತ್ತಾರೆ. ಬದಲಾವಣೆಯ ಪ್ರಶ್ನೆಯನ್ನು ಯಾರು ಎತ್ತಿದ್ದಾರೆ, ಯಾರು ಕೇಳುತ್ತಿದ್ದಾರೆ. ನಿನ್ನೆ ಉಪ ಮುಖ್ಯಮಂತ್ರಿಗಳೇ ಕ್ಲ್ಯಾರಿಫೈ ಮಾಡಿದ್ದಾರೆ. ಬದಲಾವಣೆಯನ್ನು ನಾನು ಕೇಳಿಯೇ ಇಲ್ಲ ಅಂತ. ಈಗ ಪ್ರಶ್ನೆ ಯಾರಿಂದ ಬಂದಿದೆ ಎಂಬುದೇ ಪ್ರಶ್ನೆ ಎಂದರು. ಪರಮೇಶ್ವರ್ ಮುಖ್ಯಮಂತ್ರಿ ಆಗಬೇಕು ಎಂಬ ರಾಜಣ್ಣ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಅವರು ನಮ್ಮ ಜಿಲ್ಲೆಯವರು. ಆತ ನನ್ನ ಸ್ನೇಹಿತ. ನಾವೆಲ್ಲ ಜೊತೆಯಲ್ಲೇ ಓದಿದ್ದೇವೆ. ಸ್ವಾಭಾವಿಕವಾಗಿ ಅಭಿಮಾನ ಇದ್ದೇ ಇರುತ್ತದೆ. ತುಮಕೂರಿಗೆ ಒಂದು ಅವಕಾಶ ಇದ್ರೆ ಕೊಡಿ ಅಂತ ಕೇಳಿದ್ದಾರೆ. ಅವರು ಹೇಳಿಕೆಯಲ್ಲಿ ನನಗೇನು ತಪ್ಪು ಕಾಣಿಸಿಲ್ಲ ಎಂದು ತಿಳಿಸಿದರು. ಹೆಚ್ಎಸ್ಆರ್ ಲೇಔಟ್ ಪೊಲೀಸರೇ ಕಳ್ಳರಾಗಿರುವ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಇಲಾಖೆಯಲ್ಲಿ ಇಂತಹ ಕೆಲಸಗಳು ಆದಾಗ ಕೂಡಲೇ ಅವರ ವಿರುದ್ಧ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ. ಮೇಲ್ನೋಟಕ್ಕೆ ತಪ್ಪು ಬಂದ ಕೂಡಲೇ ಅವರನ್ನು ಸಸ್ಪೆಂಡ್ ಕೂಡ ಮಾಡಲಾಗುತ್ತದೆ. ಡಿಪಾರ್ಟ್ಮೆಂಟಲ್ ತನಿಖೆ ನಡೆದ ನಂತರ ಆರೋಪ ಸಾಬೀತಾದರೆ ಅವರ ವಿರುದ್ಧ ಕಠಿಣ ಶಿಕ್ಷೆ ಇರುತ್ತದೆ. ಸಮಿತಿ ತಿಳಿಸಿದಂತೆ ಶಿಕ್ಷೆಯನ್ನು ನೀಡಲಾಗುತ್ತದೆ.
ಈ ಪ್ರಕರಣದ ವಿಚಾರವಾಗಿಯೂ ನಾನು ಈಗಾಗಲೇ ಆಯುಕ್ತರಿಗೆ ಸೂಚನೆ ನೀಡಿದ್ದೇನೆ ಎಂದರು. ಅಲ್ಲಲ್ಲಿ ಒಂದೊಂದು ಪ್ರಕರಣಗಳು ಈ ರೀತಿ ನಡೆಯುತ್ತಿರುತ್ತವೆ. ಪ್ರಕರಣ ಗಮನಕ್ಕೆ ಬಂದ ಕೂಡಲೇ ಅವರ ವಿರುದ್ಧ ಕಠಿಣ ಶಿಕ್ಷೆ ಕೂಡ ಆಗುತ್ತಿದೆ. ಹಿರಿಯ ಅಧಿಕಾರಿಗಳ ಸಭೆಯನ್ನು ಮಾಡಿದಾಗ ಕಟ್ಟುನಿಟ್ಟಾದ ಸೂಚನೆಯನ್ನು ಈಗಾಗಲೇ ನೀಡಿದ್ದೇನೆ. ಪೊಲೀಸರು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಸೇರಿದಂತೆ ಇತರ ವ್ಯವಹಾರದಲ್ಲಿ ತೊಡಗಬಾರದು ಅಂತ ಸೂಚನೆ ನೀಡಲಾಗಿದೆ. ಆದರೂ ಯಾರೋ ಒಂದಿಬ್ಬರು ಈ ರೀತಿ ಮಾಡುತ್ತಾರೆ ಎಂದರು. ಬಿಡದಿ ಟೌನ್ಶಿಪ್ ವಿಚಾರದಲ್ಲಿ ರಾಜಕೀಯ ಪಕ್ಷಗಳ ಹಗ್ಗ ಜಗ್ಗಾಟ ವಿಚಾರವಾಗಿ ಪ್ರತಿಕ್ರಿಯಿಸಿ, ಈ ಕಾರ್ಯಕ್ರಮವನ್ನು ಬಹಳ ವರ್ಷಗಳಿಂದ ಯೋಜಿಸಲಾಗಿದೆ. ನೈಸ್ ರಸ್ತೆ ನಿರ್ಮಿಸುವಾಗಲೂ ಮೂರ್ನಾಲ್ಕು ಟೌನ್ಶಿಪ್ಗಳನ್ನು ಮೈಸೂರಿಗೆ ಮಾಡಬೇಕು ಅಂತ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಬೆಂಗಳೂರಿನ ಮೇಲಿರುವ ಒತ್ತಡವನ್ನು ವಿಕೇಂದ್ರೀಕರಣ ಮಾಡುವುದೇ ಇದರ ಉದ್ದೇಶ. ಇದೇ ಉದೇಶದಿಂದಲೇ ನಮ್ಮ ಡಿಸಿಎಂ ಕೂಡ ಸಂಪುಟದ ಮುಂದೆ ಪ್ರಸ್ತಾವನೆ ಇಟ್ಟಿದ್ದರು. ಕ್ಯಾಬಿನೆಟ್ ಕೂಡ ಚರ್ಚೆ ಮಾಡಿದ ನಂತರವೇ ಒಪ್ಪಿಗೆ ನೀಡಿರುವುದು. ಆ ಯೋಜನೆಗೆ ಯಾವ ರೀತಿ ಹಣವನ್ನು ಒದಗಿಸುವುದು ಸೇರಿದಂತೆ ಭೂಮಿಯನ್ನು ವಶಪಡಿಸಿಕೊಳ್ಳಬೇಕು ಎಂಬುದರ ವಿಚಾರವಾಗಿಯೂ ಸಂಕ್ಷಿಪ್ತವಾದ ಪ್ಲಾನ್ ಇದೆ. ಯಾವುದೋ ದುರುದ್ದೇಶ ಇಟ್ಟುಕೊಂಡು ಮಾಡುತ್ತಿರುವುದು ಅಲ್ಲ. ರೈತರನ್ನು ಮನವೊಲಿಸಿ ಅವರಿಗೆ ಪರಿಹಾರ ನೀಡಿ ಮಾಡುವ ಕೆಲಸವನ್ನು ಡಿಸಿಎಂ ಮಾಡುತ್ತಾರೆ ಎಂದು ತಿಳಿಸಿದರು ಎನ್ನಲಾಗುತ್ತಿದೆ.

















