ಬೆಂಗಳೂರು: ಬಿಡದಿ ಟೌನ್ ಶಿಪ್ ವಿಚಾರವಾಗಿ ಕುಮಾರಸ್ವಾಮಿ ಅವರು ಪಂಥಾಹ್ವಾನ ಕರೆದಿದ್ದಾರಂತೆ. ಅವರ ಪಂಥಾಹ್ವಾನವನ್ನು ನಾನು ಸ್ವೀಕರಿಸುವೆ. ನನಗೆ ಮೂರು ದಿನ ಸಮಯ ಸಾಕು. ಯಾವತ್ತು ಸಮಯ ನಿಗದಿ ಮಾಡುವಿರೋ ನಾನು ಅಂದು ತಯಾರಿದ್ದೇನೆ. ಜಾಗ ಹಾಗೂ ಸಮಯ ಅವರೇ ನಿಗದಿ ಮಾಡಲಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು. ತಮ್ಮ ಸರ್ಕಾರಿ ಗೃಹ ಕಚೇರಿ ಕುಮಾರಪಾರ್ಕ್ ನಲ್ಲಿಂದು ಬಿಡದಿ ಟೌನ್ ಶಿಪ್ ಯೋಜನೆಯ ಕುರಿತು ಆ ಭಾಗದ ರೈತರೊಂದಿಗೆ ಸಭೆ ನಡೆಸಿ ಅವರು ಚರ್ಚಿಸಿದರು ಎನ್ನಲಾಗುತ್ತಿದೆ.
ಈ ಸಭೆಯಲ್ಲಿ ಭಾಗವಹಿಸಿದ ರೈತರು ನಮಗೆ ಪರಿಹಾರದ ಜತೆಗೆ ನಿವೇಶನವನ್ನು ನೀಡಿ ಎಂದು ಬೇಡಿಕೆ ಇಟ್ಟರು. ರೈತರ ಎಲ್ಲಾ ಅಹವಾಲುಗಳನ್ನು ಆಲಿಸಿದ, ಡಿ.ಕೆ.ಶಿವಕುಮಾರ್ ಕಾನೂನು ರೀತಿಯಲ್ಲಿ ಯಾವ ರೀತಿ ಸಹಾಯ ಮಾಡಲು ಸಾಧ್ಯವೋ ಅದನ್ನು ಮಾಡುವುದಾಗಿ ರೈತರಿಗೆ ಭರವಸೆ ನೀಡಿದರು. ಜೂನ್ ಮೊದಲ ವಾರದಿಂದ ಪರಿಹಾರದ ಹಣ ಬಿಡುಗಡೆಗೆ ಕ್ರಮ: ರೈತರೊಂದಿಗೆ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಸಿಎಂ, ಇಂದು ಬಿಡದಿ ಭಾಗದ ರೈತರೊಂದಿಗೆ ಚರ್ಚೆ ಮಾಡಿದ್ದೇನೆ. ಬಿಡದಿ ಟೌನ್ ಶಿಪ್ ಗೆ ಜಮೀನು ನೀಡಿರುವ ರೈತರಿಗೆ ಜೂನ್ ಮೊದಲನೇ ವಾರದಿಂದ ಪರಿಹಾರದ ಹಣ ಬಿಡುಗಡೆಗೆ ಕ್ರಮವಹಿಸುತ್ತೇನೆ. ಮೂರು ಹಳ್ಳಿಗಳನ್ನು ಸೇರಿಸಿ ಪ್ರತ್ಯೇಕವಾದ ಅಂತಿಮ ಹಂತದ ನೋಟಿಫಿಕೇಶನ್ ಮಾಡಬೇಕು ಎಂದು ನಾವು ತೀರ್ಮಾನ ಮಾಡಿದ್ದೇವೆ. ಬಿಡದಿ ಟೌನ್ ಶಿಪ್ ವಿಚಾರವಾಗಿ ಅಲ್ಲಿನ ಶೇ.80ರಷ್ಟು ರೈತರು ಒಪ್ಪಿಗೆ ನೀಡಿದ್ದು, ಆದಷ್ಟು ಬೇಗ ಪರಿಹಾರ ವಿತರಿಸಿ ಎಂದು ಒತ್ತಾಯ ಮಾಡಿದ್ದಾರೆ. ಭೂ ರಹಿತರ ಬಗ್ಗೆ ಕಾಳಜಿ ವಹಿಸಿದ್ದು ಈ ವಿಚಾರ ಬಗೆಹರಿಸಲಾಗುವುದು ಎಂದರು. ಈ ಯೋಜನೆ ನಾನು ಮಾಡಿದ್ದಲ್ಲ. ಕುಮಾರಸ್ವಾಮಿ ಅವರ ಕಾಲದಲ್ಲೇ ನೋಟಿಫಿಕೇಷನ್ ಮಾಡಲಾಗಿತ್ತು. ಅವರ ಕಾಲದಲ್ಲೇ 8 ಸಾವಿರ ಅಡಿ ಕೊಡಬೇಕೆಂದು ತೀರ್ಮಾನ ಮಾಡಲಾಗಿತ್ತು. ಈ ಯೋಜನೆಯನ್ನು ಡಿಎಲ್ ಎಫ್ ಕಂಪನಿಗೆ ನೀಡಿದ್ದರು. ಆ ಕಂಪನಿ ಈ ಯೋಜನೆ ನಮಗೆ ಕಾರ್ಯಸಾಧು ಅಲ್ಲವೆಂದು ಹಣ ವಾಪಸ್ ತೆಗೆದುಕೊಂಡು ಹೋದರು ಎಂದು ಹೇಳಿದರು. ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ ಅವರು ಕಾಲದಲ್ಲಿ ಕೆಐಡಿಬಿಯವರು 1 ಸಾವಿರ ಎಕರೆ ತೆಗೆದುಕೊಂಡಿದ್ದರು. ಆಗ ಯಾರೂ ಮಾತನಾಡಲಿಲ್ಲ.
ಆಗ ರೈತರು ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದಾಗ, ನಾನೇ ಮಾಡಿಸಿದ್ದು ಈಗ ಏನು ಮಾಡೋಕೆ ಆಗಲ್ಲ ಎಂದರಂತೆ ಎಂದರು. ರೈತರ ವಿಶ್ವಾಸ ಪಡೆದು ಯೋಜನೆ ಮುಂದುವರಿಕೆ: ಈ ಪ್ರದೇಶವನ್ನು ರೆಡ್ ಜೋನ್ ಎಂದು ತೀರ್ಮಾನ ಮಾಡಲಾಗಿತ್ತು. ಅಂದರೆ ಯಾರೂ ಸಹ ಭೂಮಿ ಮಾರುವಂತಿಲ್ಲ. ಬೇರೆ ಯಾರಿಗೂ ಕೂಡ ವಹಿವಾಟು ಮಾಡುವಂತಿಲ್ಲ ಎಂದು ಕಾನೂನು ಮಾಡಲಾಗಿತ್ತು. ಈ ಯೋಜನೆ ಕೈ ಬಿಡಬೇಕು ಎಂದು ಕೆಲವರು ನ್ಯಾಯಾಲಯಕ್ಕೂ ಅರ್ಜಿ ಹಾಕಿಕೊಂಡಿದ್ದರು. ಆದರೆ ನ್ಯಾಯಾಲಯ ಕೂಡ ಯೋಜನೆ ಕೈ ಬಿಡಲು ನಿರಾಕರಿಸಿತ್ತು. ಈ ಕಾರಣಕ್ಕೆ ನಾನು ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯೋಜನೆ ಮುಂದುವರೆಸುತ್ತಿದ್ದೇನೆ. ಸ್ವಲ್ಪ ಹೆಚ್ಚಿನ ಪರಿಹಾರ ಕೊಟ್ಟಿದ್ದೇನೆ. ಜೊತೆಗೆ, ಅವರೆಲ್ಲರೂ ನಮ್ಮನ್ನು ಬೆಂಗಳೂರಿನವರು ಎಂದು ಗುರುತಿಸಿ ಆ ಜಿಲ್ಲೆಗೆ ಸೇರಿಸಿದ್ದೀರಿ ಎಂದು ಸಂತೋಷಗೊಂಡಿದ್ದಾರೆ. ಮೊದಲಿಗೆ ಇದ್ದಂತಹ ಬೆಂಗಳೂರು ಜಿಲ್ಲೆಯನ್ನು ಉಳಿಸಿದ್ದೀರಿ ಎಂದು ಸಂತಸಗೊಂಡಿದ್ದಾರೆ. ಯಾವ ರೈತರೂ ಸಹ ಭೂಮಿ ಮಾರಿಕೊಳ್ಳಬೇಡಿ ಎಂದು ಮನವರಿಕೆ ಮಾಡಿಕೊಟ್ಟಿದ್ದೇನೆ. ಏಕೆಂದರೆ ನಿಮಗೆಲ್ಲರಿಗೂ ಇದರ ಬೆಲೆ ಅರ್ಥವಾಗುವುದಿಲ್ಲ ಎಂದು ಹೇಳಿದ್ದೇನೆ. ಎಲ್ಲರೂ ಸಹ ಇದಕ್ಕೆ ಒಪ್ಪಿಕೊಂಡಿದ್ದಾರೆ ಎಂದರು. ಕನಕಪುರ ರಸ್ತೆ, ಮೈಸೂರು-ಬೆಂಗಳೂರು ರಸ್ತೆ, ನೈಸ್ ರಸ್ತೆಯನ್ನು ಇದಕ್ಕೆ ಸಂಪರ್ಕಿಸಲಾಗುವುದು. ಭವಿಷ್ಯದಲ್ಲಿ ಪ್ರೀಮಿಯಂ ಎಫ್ ಎಆರ್ ಕೂಡ ನೀಡಲಾಗುವುದು. ಎಐ ನಗರ ಹೇಗಿರಲಿದೆ ಎಂದು ವಿದೇಶಿಗರು ನಮ್ಮನ್ನು ಕೇಳುತ್ತಿದ್ದಾರೆ.
ಈ ಯೋಜನೆ ಜಾರಿಗೆ ಅಗತ್ಯವಿರುವ ಭೂಮಿ ನಮ್ಮ ಕೈಸೇರಿದ ಬಳಿಕ ನಾವು ಈ ಯೋಜನೆಯ ನೀಲನಕ್ಷೆ ಪ್ರಕಟಿಸುತ್ತೇವೆ ಎಂದರು. ಪಂಥಾಹ್ವಾನದ ಬಗ್ಗೆ ರೈತರಿಗೆ ಹೇಳಿದಾಗ, ಅಣ್ಣ ನೀವು ಬೇಡ ನಾವೇ ಪಂಥಾಹ್ವಾನ ಸ್ವೀಕರಿಸುತ್ತೇವೆ, ನಾವೇ ಅವರಿಗೆ ಉತ್ತರ ಕೊಡುತ್ತೇವೆ ಎಂದು ಹೇಳಿದ್ದಾರೆ. ಕಬ್ಬಿಣ, ಸ್ಟೀಲ್ ಬೆಲೆ ಟನ್ ಗೆ ಐದು ಸಾವಿರ ಹೆಚ್ಚಳವಾಗಿದೆ. ಕುಮಾರಣ್ಣನವರೇ ಇದರ ಸಚಿವರು. ಇದನ್ನು ಮೊದಲು ಇದನ್ನು ಕಡಿಮೆ ಮಾಡಿಸಲು ಹೇಳಿ ಆ ನಂತರ ಪಂಥಾಹ್ವಾನಕ್ಕೆ ಬರಲಿ ಎಂದು ರೈತರು ನನಗೆ ಸಲಹೆ ನೀಡಿದರು. ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳವಾದ ಮೇಲೆ ಇದರ ಬೆಲೆಯೂ ಜಾಸ್ತಿಯಾಗಲಿದೆ. ಮೊದಲು ನೀವು ಕುಮಾರಸ್ವಾಮಿ ಅವರನ್ನು ಇದರ ಬಗ್ಗೆ ಪ್ರಶ್ನಿಸಿ ಎಂದು ರೈತರು ನನಗೆ ಹೇಳಿದರು ಎನ್ನಲಾಗಿದೆ.
















