ಮನೆ ರಾಜ್ಯ ರಣರಂಗವನ್ನು ಬಿಟ್ಟು ಓಡಿ ಹೋಗುವ ಹೇಡಿ ನಾನಾಗಲಾರೆ: ವಿರೋಧಿಗಳ ವಿರುದ್ಧ ಸಮರ – ಸಿಎಂ

ರಣರಂಗವನ್ನು ಬಿಟ್ಟು ಓಡಿ ಹೋಗುವ ಹೇಡಿ ನಾನಾಗಲಾರೆ: ವಿರೋಧಿಗಳ ವಿರುದ್ಧ ಸಮರ – ಸಿಎಂ

0

ಬೆಂಗಳೂರು : ರಣರಂಗವನ್ನು ಬಿಟ್ಟು ಓಡಿ ಹೋಗುವ ಹೇಡಿ ನಾನಾಗಲಾರೆ ಎಂದು ರಾಜಕೀಯ ವಿರೋಧಿಗಳ ವಿರುದ್ಧ ಸಿಎಂ ಸಿದ್ದರಾಮಯ್ಯ ಸಮರ ಸಾರಿದ್ದಾರೆ. ಸಾಮಾಜಿಕ ದಿನದ ಪ್ರಯುಕ್ತ ಎಕ್ಸ್‌ನಲ್ಲಿ ಅಂಕಣ ಪೋಸ್ಟ್ ಮಾಡಿರುವ ಸಿಎಂ, ಕುರ್ಚಿ ಕಿತ್ತಾಟದ ನಡುವೆ ವಿರೋಧಿಗಳಿಗೆ ಸಂದೇಶ ರವಾನಿಸಿದ್ದಾರೆ. ಸದ್ಯ ಸಿಎಂ ಪೋಸ್ಟ್ ಎಲ್ಲರಲ್ಲಿ ಕುತೂಹಲ ಮೂಡಿಸಿದೆ.

ಸಾಮಾಜಿಕ ನ್ಯಾಯಕ್ಕಾಗಿ ನನ್ನ ಉಸಿರಿರುವ ವರೆಗೆ ಹೋರಾಡುತ್ತೇನೆ. ನನ್ನ ನಾಲ್ಕು ದಶಕಗಳ ರಾಜಕೀಯ ಜೀವನ ಎಂದಿಗೂ ಹೂವಿನ ಹಾಸಿಗೆ ಆಗಿರಲಿಲ್ಲ. ಅದು ಕಲ್ಲು-ಮುಳ್ಳುಗಳ ಹಾದಿಯಾಗಿತ್ತು. ನನ್ನನ್ನು ರಾಜಕೀಯವಾಗಿ ಮುಗಿಸಲು ಹಲವಾರು ದೊಡ್ಡದೊಡ್ಡ ನಾಯಕರು ಹಲವಾರು ಬಗೆಯ ಕುಟಿಲ ಕಾರಸ್ತಾನಗಳನ್ನು ಮಾಡಿದ್ದಾರೆ. ಅವುಗಳನ್ನೆಲ್ಲವನ್ನೂ ಜನತೆಯ ಆಶೀರ್ವಾದದಿಂದ ಗೆದ್ದು ಬಂದಿದ್ದೇನೆ.

ಇದು ನನ್ನ ವಿರುದ್ಧ ನಡೆಯುತ್ತಿರುವ ಷಡ್ಯಂತ್ರಗಳಲ್ಲ. ಇದು ನನ್ನನ್ನು ನಂಬಿರುವ, ಪ್ರೀತಿಸುತ್ತಿರುವ, ನನಗೆ ನಿರಂತರವಾಗಿ ಆಶೀರ್ವಾದ ನೀಡಿ ಬೆಂಬಲಿಸುತ್ತಿರುವ ನಿಮ್ಮ ವಿರುದ್ಧ ನಡೆಯುತ್ತಿರುವ ಷಡ್ಯಂತ್ರ ಎನ್ನುವುದು ನನಗೆ ಚೆನ್ನಾಗಿ ಗೊತ್ತು. ಆದ್ದರಿಂದ ನನ್ನ ಉಸಿರು ಇರುವವರೆಗೆ ಈ ರಾಜಕೀಯ ಷಡ್ಯಂತ್ರ, ದ್ವೇಷ-ಅಸೂಯೆಯ ರಾಜಕಾರಣದ ವಿರುದ್ಧ ಹೋರಾಡುತ್ತೇನೆ. ಇದು ಸತ್ಯ, ನ್ಯಾಯ ಮತ್ತು ಧರ್ಮಕ್ಕಾಗಿ ನಡೆಯುತ್ತಿರುವ ಹೋರಾಟ. ನಿಮ್ಮೆಲ್ಲರ ಬೆಂಬಲದೊಂದಿಗೆ ಈ ಹೋರಾಟವನ್ನು ನನ್ನ ಉಸಿರು ಇರುವವರೆಗೆ ನಡೆಸುತ್ತೇನೆ. ರಣರಂಗವನ್ನು ಬಿಟ್ಟು ಓಡಿ ಹೋಗುವ ಹೇಡಿ ನಾನಾಗಲಾರೆ.

ಅವಕಾಶ ವಂಚಿತರ ಪರ ನಿಂತವರನ್ನು ವರ್ತಮಾನವು ಕ್ರೂರವಾಗಿ ನಡೆಸಿಕೊಂಡಿದೆ. ಸಾಮಾಜಿಕ ನ್ಯಾಯದ ಬಂಡಿಯನ್ನು ಮುಂದಕ್ಕೆ ಎಳೆದುಕೊಂಡು ಹೋಗುವುದು ಸುಲಭದ ಕೆಲಸ ಅಲ್ಲ ಎನ್ನುವುದನ್ನು ನಾನು ಅನುಭವದ ಮೂಲಕ ಅರಿತುಕೊಂಡಿದ್ದೇನೆ. ಈ ಪ್ರಯತ್ನ ನಡೆಸಿದವರೆಲ್ಲರನ್ನು ವರ್ತಮಾನ ಬಹಳ ಕ್ರೂರವಾಗಿ ನಡೆಸಿಕೊಂಡಿದೆ. ನಾನು ಸಾಮಾಜಿಕ ನ್ಯಾಯದ ಪರವಾಗಿ ದನಿ ಎತ್ತುವ ಮತ್ತು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವ ಪ್ರಯತ್ನವನ್ನು ಮಾಡಿದಾಗೆಲ್ಲ ನನ್ನ ವಿರುದ್ಧ ದಾಳಿಗಳು ನಡೆದಿವೆ. ಇದು ಈಗಲೂ ಮುಂದುವರಿಯುತ್ತಿದೆ. ನನ್ನ ವಿರುದ್ಧ ಯಾಕೆ ಷಡ್ಯಂತ್ರ ಮಾಡುತ್ತಿದ್ದಾರೆ ಎನ್ನುವುದೂ ನನಗೆ ಗೊತ್ತಿದೆ.

ನಾನು ಈ ರಾಜ್ಯದ ಬಡವರು, ಶೋಷಿತರು, ಅವಕಾಶ ವಂಚಿತರ ಪರವಾಗಿದ್ದೇನೆ, ಸಾಮಾಜಿಕ ನ್ಯಾಯದ ಪರವಾಗಿದ್ದೇನೆ, ಸಂವಿಧಾನದ ಪರವಾಗಿದ್ದೇನೆ, ಶೋಷಿತರ ಅಭಿವೃದ್ದಿಗಾಗಿ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೆ ತಂದಿದ್ದೇನೆ, ದುರ್ಬಲರಿಗೆ ಅನ್ಯಾಯವಾದಾಗ ದನಿ ಎತ್ತಿದ್ದೇನೆ. ಇದಕ್ಕಾಗಿ ರಾಜ್ಯದ ಜನತೆ 136 ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ಅಧಿಕಾರಕ್ಕೆ ತಂದಿದ್ದಾರೆ. ಇದು ನಮ್ಮ ರಾಜಕೀಯ ವಿರೋಧಿಗಳಿಗೆ ಸಹಿಸಲಾಗುತ್ತಿಲ್ಲ ಎಂದು ಬರೆದುಕೊಂಡಿದ್ದಾರೆ.