ಮನೆ ರಾಜ್ಯ ಬೆಳಗಾವಿಯಲ್ಲೇ ಅಧಿವೇಶನ; ದಿನಕ್ಕೊಮ್ಮೆ ಇಂಧನ ದರ ಏರಿಕೆ ಯಾಕೆ? – ಹೆಚ್.ಕೆ. ಪಾಟೀಲ್ ಆಕ್ರೋಶ..!

ಬೆಳಗಾವಿಯಲ್ಲೇ ಅಧಿವೇಶನ; ದಿನಕ್ಕೊಮ್ಮೆ ಇಂಧನ ದರ ಏರಿಕೆ ಯಾಕೆ? – ಹೆಚ್.ಕೆ. ಪಾಟೀಲ್ ಆಕ್ರೋಶ..!

0

ಗದಗ : ರಾಜ್ಯ ಸರ್ಕಾರದ ಅಧಿವೇಶನವನ್ನು ಬೆಳಗಾವಿಯ ಸುವರ್ಣ ಸೌಧದಲ್ಲೇ ನಡೆಸಲಿದ್ದೇವೆ. ಸ್ಥಳ ಬದಲಾವಣೆ ಮಾಡುವ ಯಾವುದೇ ನಿರ್ಣಯ ಸರ್ಕಾರದಲ್ಲಿ ಆಗಿಲ್ಲ” ಎಂದು ಕಾನೂನು, ನ್ಯಾಯ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ. ಪಾಟೀಲ್ ಸ್ಪಷ್ಟಪಡಿಸಿದ್ದಾರೆ. ಗದಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಧಿವೇಶನ ಹಾಗೂ ಇಂಧನ ದರ ಏರಿಕೆ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಸರ್ಕಾರದ ನಿಲುವನ್ನು ಹಂಚಿಕೊಂಡರು.

ಬೆಳಗಾವಿ ಅಧಿವೇಶನದ ದಿನಾಂಕ ಪ್ರಕಟಣೆಯ ಕುರಿತು ಉತ್ತರಿಸಿದ ಸಚಿವರು, “ಮಳೆಗಾಲದ ಅಧಿವೇಶನದ ಬಗ್ಗೆ ಇನ್ನು ಕ್ಯಾಬಿನೆಟ್ ಅಧಿಕೃತ ನಿರ್ಣಯ ಕೈಗೊಂಡಿಲ್ಲ. ಇದೇ ಮೇ 29 ರಂದು ಮತ್ತೆ ಸಚಿವ ಸಂಪುಟ ಸಭೆ ನಡೆಯುವ ಸಾಧ್ಯತೆಯಿದ್ದು, ಅಲ್ಲಿ ದಿನಾಂಕದ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು” ಎಂದರು. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವ ಕುರಿತು ಕೇಂದ್ರ ಸರ್ಕಾರದ ವಿರುದ್ಧ ಸಚಿವ ಎಚ್.ಕೆ. ಪಾಟೀಲ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ದೇಶದ ಆರ್ಥಿಕ ಸ್ಥಿತಿ ಸರಿಯಾದ ಮಾರ್ಗದಲ್ಲಿ ಇಲ್ಲವೇನೋ ಅನಿಸುತ್ತಿದೆ. ಆ ಕಾರಣಕ್ಕಾಗಿಯೇ ಕೇಂದ್ರ ಸರ್ಕಾರ ಜನರ ಬದುಕನ್ನು ಘಾಸಿಗೊಳಿಸುತ್ತಿದೆ. ಎರಡು ದಿನಕ್ಕೊಮ್ಮೆ, ಮೂರು ದಿನಕ್ಕೊಮ್ಮೆ ಪೆಟ್ರೋಲ್ ಬೆಲೆ ಏರಿಸುತ್ತಿರುವುದು ಯಾಕೆ? ಚುನಾವಣೆ ನಡೆದ ಮೂರು ತಿಂಗಳು ಒಂದು ರೂಪಾಯಿಯೂ ಹೆಚ್ಚಾಗಲಿಲ್ಲ. ಆವಾಗ ದೇಶದ ಆರ್ಥಿಕತೆಯ ಬಗ್ಗೆ ಕಲ್ಪನೆ ಇರಲಿಲ್ಲವೇ?

ಈಗ ಒಮ್ಮಿಂದೊಮ್ಮೆಗೆ ಶನಿವಾರಕ್ಕೊಮ್ಮೆ, ಸೋಮವಾರಕ್ಕೊಮ್ಮೆ ಬೆಲೆ ಏರಿಕೆ ಮಾಡುತ್ತಿರುವುದು ಅತ್ಯಂತ ದುರ್ದೈವದ ಸಂಗತಿ. ಕೇಂದ್ರ ಸರ್ಕಾರ ಇನ್ನುಮುಂದಾದರೂ ಎಚ್ಚೆತ್ತುಕೊಳ್ಳಬೇಕು, ಜನರ ಬದುಕಿನೊಂದಿಗೆ ಚಲ್ಲಾಟ ಆಡಬಾರದು ಎಂದು ಕಿಡಿಕಾರಿದರು. ಇದೇ ವೇಳೆ ಗ್ಯಾರಂಟಿ ಯೋಜನೆಗಳ ಅರ್ಹತಾ ಪರಿಷ್ಕರಣೆ ಕುರಿತು ಮಾತನಾಡಿದ ಅವರು, ಸಾರ್ವಜನಿಕರು ಯಾವುದೇ ರೀತಿಯ ಭಯ ಪಡುವ ಅಗತ್ಯವಿಲ್ಲ ಎಂದು ಧೈರ್ಯ ತುಂಬಿದರು.

ಎಸ್‌ಐಆರ್ ನಲ್ಲಿ ವೋಟಿಂಗ್ ಹಕ್ಕು ಕಳೆದುಕೊಂಡರೆ ಗ್ಯಾರಂಟಿ ಯೋಜನೆಗಳು ನಿಲ್ಲುತ್ತವೆ ಎನ್ನುವ ಭಯ ಸಾರ್ವಜನಿಕರಲ್ಲಿದೆ, ಆದರೆ ಅದು ನಿಜವಲ್ಲ. ಕೆಲವರಿಗೆ ಜಿಎಸ್‌ಟಿ ಕಾರಣದಿಂದಾಗಿ ತಾಂತ್ರಿಕವಾಗಿ ಯೋಜನೆಗಳು ತಡೆಹಿಡಿಯಲ್ಪಟ್ಟಿದ್ದವು. ಅಂಥವರಿಂದ ಸೂಕ್ತ ಸ್ಪಷ್ಟೀಕರಣ ಪಡೆದು, ಪರಿಷ್ಕರಣೆ ನಡೆಸಿ ಗ್ಯಾರಂಟಿ ಸೌಲಭ್ಯವನ್ನು ಮುಂದುವರಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷರಾದ ಬಿ.ಬಿ. ಅಸೂಟಿ, ಪ್ರಮುಖರಾದ ಅನಿಲ ಗರಗ, ಎಸ್.ಎನ್. ಬಳ್ಳಾರಿ, ಅಕ್ಬರ್ ಬಬರ್ಜಿ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.