ಚಿಕ್ಕಮಗಳೂರು: ಹಲಸಿನ ಹಣ್ಣು ತನ್ನ ವಿಶಿಷ್ಟ ರುಚಿ, ಸುವಾಸನೆ ಹಾಗೂ ಪೌಷ್ಟಿಕ ಗುಣಗಳಿಗೆ ಪ್ರಸಿದ್ಧಿ. ರಾಜ್ಯದ ಹಲವು ಭಾಗಗಳಲ್ಲಿ ಹಲಸು ಬೆಳೆಯಲಾಗುತ್ತಿದೆ. ಆದರೆ ಚಿಕ್ಕಮಗಳೂರಿನ ಕಡೂರು ತಾಲೂಕಿನ ಸಖರಾಯಪಟ್ಟಣದ ಹಲಸಿಗೆ ವಿಭಿನ್ನ ಹೆಸರು ಮತ್ತು ಬೇಡಿಕೆ ಇದೆ. ಈ ಭಾಗದಲ್ಲಿ ಹಲಸಿನ ಸುಗ್ಗಿ ಶುರುವಾಗಿದ್ದು, ರಸ್ತೆಯುದ್ದಗಲಕ್ಕೂ ರಾಶಿರಾಶಿಯಾಗಿ ಇಟ್ಟಿರುವ ಹಲಸಿನ ಹಣ್ಣುಗಳು ಜನರನ್ನು ತನ್ನ ತನ್ನತ್ತ ಸೆಳೆಯುತ್ತಿವೆ. ಮಲೆನಾಡು ಹಾಗೂ ಬಯಲು ಸೀಮೆಯ ಹವಾಮಾನದ ಮಿಶ್ರಣ ಹೊಂದಿರುವ ಸಖರಾಯಪಟ್ಟಣ ಭಾಗದ ಮಣ್ಣು ಮತ್ತು ವಾತಾವರಣ ಹಲಸು ಬೆಳೆಗೆ ಅತ್ಯಂತ ಅನುಕೂಲಕರವಾಗಿದೆ. ಇದೇ ಕಾರಣಕ್ಕೆ ಇಲ್ಲಿನ ಹಲಸು ಸಕ್ಕರೆಯಷ್ಟು ಸಿಹಿಯಾಗಿದ್ದು, ವಿಶಿಷ್ಟ ಸುವಾಸನೆ ಮತ್ತು ರುಚಿ ಹೊಂದಿವೆ. ಇಲ್ಲಿನ ಅಡಿಕೆ ತೋಟಗಳ ಬದಿಗಳಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಹಲಸು ಬೆಳೆಯಲಾಗುತ್ತಿದ್ದು, ರೈತರಿಗೆ ಇದು ಪ್ರಮುಖ ಉಪ ಬೆಳೆಯಾಗಿದೆ. ಸಖರಾಯ ಪಟ್ಟಣದಲ್ಲಿ ಬೆಳೆಯುವ ಹಲಸಿನಲ್ಲಿ ಹಲವು ಜಾತಿಗಳಿವೆ. ಮುಖ್ಯವಾಗಿ ಚಂದ್ರ ಬೊಕ್ಕೆ, ರುದ್ರಾಕ್ಷಿ ಬೊಕ್ಕೆ, ಇಂಬ ಹಲಸು, ನಾಟಿ ಹಲಸು, ಸಕ್ಕರೆ ಹಲಸು, ತುಪ್ಪದ ಹಲಸು, ಕೆಂಪು ತೊಳೆ ಹಲಸು ಹಾಗೂ ಬಿಳಿ ತೊಳೆ ಹಲಸುಗಳ ಬೆಳೆ ಹೆಚ್ಚಾಗಿದೆ. ಕೆಲವು ಜಾತಿಗಳು ಹೆಚ್ಚು ಸಿಹಿಯಾಗಿದ್ದರೆ, ಕೆಲವು ಗಟ್ಟಿಯಾದ ತೊಳೆ ಹಾಗೂ ಹೆಚ್ಚಿನ ಗರಿಗಳನ್ನು ಹೊಂದಿರುವುದರಿಂದ ಮಾರುಕಟ್ಟೆಯಲ್ಲಿ ವಿಶೇಷ ಬೇಡಿಕೆ ಪಡೆದಿವೆ ಎನ್ನಲಾಗಿದೆ.
ಹಾಗೂ ಹಲಸಿನ ಹಣ್ಣನ್ನು ಕೇವಲ ಹಣ್ಣಾಗಿ ಮಾತ್ರವಲ್ಲದೆ ಹಪ್ಪಳ, ಸಂಡಿಗೆ, ಪಲ್ಯ, ಪಾಯಸ, ಚಿಪ್ಸ್, ಹಲಸಿನ ಹೋಳಿಗೆ, ಮುದ್ದೆ, ಜಾಮ್ ಸೇರಿದಂತೆ ವಿವಿಧ ಆಹಾರ ಪದಾರ್ಥಗಳ ತಯಾರಿಕೆಗೆ ಬಳಸಲಾಗುತ್ತಿದೆ. ಇದರಿಂದ ಹಲಸು ಆಧಾರಿತ ಸಣ್ಣ ಕೈಗಾರಿಕೆಗಳಿಗೂ ಉತ್ತೇಜನ ದೊರೆಯುತ್ತಿದ್ದು, ರೈತರಿಗೆ ಹೆಚ್ಚುವರಿ ಆದಾಯದ ಮೂಲವಾಗಿದೆ. ಕಡೂರಿನಿಂದ ಚಿಕ್ಕಮಗಳೂರಿಗೆ ಸಂಪರ್ಕಿಸುವ ರಾಜ್ಯ ಹೆದ್ದಾರಿಯ ಇಕ್ಕೆಲಗಳಲ್ಲಿ ಹಲಸಿನ ಹಣ್ಣಿನ ಮಾರಾಟ ಜೋರಾಗಿದ್ದು ಕೆಲವರು ಇಡಿಯಾಗಿ, ಇನ್ನೂ ಕೆಲವರು ತೊಳೆ ತೆಗೆದು ಮಾರಾಟ ಮಾಡುತ್ತಿದ್ದಾರೆ. ದೂರದ ಜಿಲ್ಲೆಗಳಿಂದಲೂ ವ್ಯಾಪಾರಿಗಳು ಆಗಮಿಸಿ, ಹಲಸು ಖರೀದಿಸುವ ದೃಶ್ಯ ಇಲ್ಲಿ ಸಾಮಾನ್ಯವಾಗಿದೆ. ಪ್ರವಾಸಿಗರೂ ಸಹ ಸಖರಾಯ ಪಟ್ಟಣದ ಹಲಸಿನ ರುಚಿ ಸವಿಯದೇ ಮುಂದೆ ಸಾಗುವುದಿಲ್ಲ. ಹಲಸಿನ ಮರವನ್ನು ಪೀಠೋಪಕರಣಗಳ ತಯಾರಿಕೆಗೆ ಬಳಸಲಾಗುತ್ತಿರುವ ಹಿನ್ನೆಲೆಯಲ್ಲಿ ಮರಗಳನ್ನು ಕಡಿದು ಹಾಕುವ ಪ್ರಮಾಣವೂ ಹೆಚ್ಚುತ್ತಿದೆ ಎಂಬ ಆತಂಕ ರೈತ ವಲಯದಲ್ಲಿ ಕೇಳಿಬರುತ್ತಿದೆ. ಆದರೂ, ಅನೇಕ ರೈತರು ತಮ್ಮ ತೋಟಗಳಲ್ಲಿ ದಶಕಗಳಷ್ಟು ಹಳೆಯ ಹಲಸಿನ ಮರಗಳನ್ನು ಸಂರಕ್ಷಿಸಿಕೊಂಡು ಈ ಕೃಷಿ ಪರಂಪರೆಯನ್ನು ಪೀಳಿಗೆಯಿಂದ ಪೀಳಿಗೆಗೆ ಮುಂದುವರಿಸುತ್ತಿದ್ದಾರೆ. ಕಡಿಮೆ ನೀರಿನ ಅವಶ್ಯಕತೆ ಹಾಗೂ ಹೆಚ್ಚಿನ ನಿರ್ವಹಣೆ ಬೇಡದ ಬೆಳೆ ಎನ್ನುವ ಕಾರಣದಿಂದ ಹಲಸು ರೈತರಿಗೆ ಆರ್ಥಿಕವಾಗಿ ಸಹಾಯಕವಾಗಿದೆ. ರಾಜ್ಯ ಮಟ್ಟದಲ್ಲಿಯೂ ‘ಸಖರಾಯಪಟ್ಟಣ ಹಲಸು’ ವಿಶಿಷ್ಟ ಗುರುತು ಪಡೆಯುತ್ತಿದ್ದು ಸರಿಯಾದ ಮಾರುಕಟ್ಟೆ ವ್ಯವಸ್ಥೆ, ಸಂಸ್ಕರಣಾ ಘಟಕಗಳು ಹಾಗೂ ಮೌಲ್ಯವರ್ಧನೆಗೆ ಸರ್ಕಾರದಿಂದ ಉತ್ತೇಜನ ದೊರೆತರೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಈ ಭಾಗದ ಹಲಸು ಮತ್ತಷ್ಟು ಖ್ಯಾತಿ ಪಡೆಯುವ ಸಾಧ್ಯತೆ ಇದೆ ಎಂಬುದ್ದಾಗಿದೆ.


















