ಮನೆ ರಾಜ್ಯ ಆರ್‌ಎಸ್‌ಎಸ್‌ ಹಾಲಿ-ಮಾಜಿ ತಾಲೂಕು ಪ್ರಮುಖರ ಮಧ್ಯೆ ಯುದ್ಧ – ತಲವಾರ್‌ನಿಂದ ಹಲ್ಲೆ, 7 ಜನ ಅರೆಸ್ಟ್..!

ಆರ್‌ಎಸ್‌ಎಸ್‌ ಹಾಲಿ-ಮಾಜಿ ತಾಲೂಕು ಪ್ರಮುಖರ ಮಧ್ಯೆ ಯುದ್ಧ – ತಲವಾರ್‌ನಿಂದ ಹಲ್ಲೆ, 7 ಜನ ಅರೆಸ್ಟ್..!

0

ಬೆಳಗಾವಿ : ಆರ್‌ಎಸ್‌ಎಸ್ ಹಾಲಿ-ಮಾಜಿ ತಾಲೂಕು ಪ್ರಮುಖರ ಮಧ್ಯೆ ನಾನಾ-ನೀನಾ ಯುದ್ಧ ನಡೆದಿದ್ದು, ಹಾಲಿ ಪ್ರಮುಖನ ಮೇಲೆ ಮಾಜಿ ಪ್ರಮುಖ ತಲವಾರ್ ಹಿಡಿದು ಬೆನ್ನಟ್ಟಿ ಹಲ್ಲೆ ನಡೆಸಿದ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ನಡೆದಿದೆ. ಹುಕ್ಕೇರಿ ತಾಲೂಕು ಮಾಜಿ ಪ್ರಮುಖ ಸಮೀರ್ ಪಾಟೀಲ ಬೆಂಬಲಿಗರು ಸೇರಿಕೊಂಡು ಆರ್‌ಎಸ್‌ಎಸ್ ಪ್ರಮುಖ ದತ್ತಾತ್ರೇಯ ಥೋರಾವತ್ ಮೇಲೆ ತಲವಾರ್‌ನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.

ಈ ಹಿಂದೆ ಸಮೀರ್ ಪಾಟೀಲ್ ಹುಕ್ಕೇರಿ ತಾಲೂಕು ಪ್ರಮುಖರಾಗಿದ್ದರು. ಆ ಹುದ್ದೆ ಈಗ ದತ್ತಾತ್ರೇಯ ಥೋರಾವತ್‌ಗೆ ಸಿಕ್ಕಿತ್ತು. ಇದರಿಂದ ಸಮೀರ್‌ಗೆ ಅಸಮಾಧಾನ ಉಂಟಾಗಿತ್ತು. ಜೊತೆಗೆ ಉಭಯ ಪ್ರಮುಖರ ಬೆಂಬಲಿಗರ ಮಧ್ಯೆ ಕಳೆದೊಂದು ವರ್ಷದಿಂದ ಶೀತಲ ಸಮರವು ನಡೆದಿತ್ತು. ಹೀಗಾಗಿ ದತ್ತಾತ್ರೇಯ ಕೊಲೆಗೆ ಸಮೀರ್ ಬೆಂಬಲಿಗ ಶ್ಯಾಮ್ ಯಾದವ್ ಸ್ಕೆಚ್ ಹಾಕಿದ್ದ. ಮಹಾರಾಷ್ಟ್ರದ ನಾಲ್ವರನ್ನು ಕರೆಯಿಸಿ, ಹುಕ್ಕೇರಿ ತಾಲೂಕಿನ ಹರ್ಗಾಪುರದಲ್ಲಿರುವ ಸಮೀರ್‌ಗೆ ಸೇರಿದ ಫಾರ್ಮ್ಹೌಸ್‌ನಲ್ಲಿ ಹತ್ಯೆಗೆ ಸಂಚು ಹೂಡಿದ್ದರು.

ಸಮೀರ್ ಟೀಂ ಬಳಿಕ ಇಚಲಕರಂಜಿಯ ಸಂಕೇತ್ ಮೇತ್ರಿ ಸಂಪರ್ಕಿಸಿದ್ದಾರೆ. ಆಗ ಮತ್ತಿಬ್ಬರನ್ನು ಕರೆಯಿಸಿ ಮದುವೆ ಮಂಟಪದಿಂದ ಹೊರಬರ್ತಿದ್ದ ದತ್ತಾತ್ರೇಯ ಮೇಲೆ ಅಟ್ಯಾಕ್ ಮಾಡಿದ್ದಾರೆ. ಈ ವೇಳೆ ದತ್ತಾತ್ರೇಯ ಜನರಿದ್ದ ಕಡೆ ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ. ಕ್ಷಣಕಾಲ ಸಂಕೇಶ್ವರ ಪಟ್ಟಣದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿತ್ತು. ಕೂಡಲೇ ಪೊಲೀಸರ ಬಿಗಿ ಭದ್ರತೆ ನಿಯೋಜನೆ ಮಾಡಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವೈಯಕ್ತಿಕ ಪ್ರತಿಷ್ಠೆಯೇ ಕೃತ್ಯಕ್ಕೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ದೃಢವಾಗಿದ್ದು, ಸಮೀರ್ ಪಾಟೀಲ ಸೇರಿ ಏಳು ಜನರನ್ನು ಅರೆಸ್ಟ್ ಮಾಡಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ದತ್ತಾತ್ರೇಯ ಥೋರಾವತ್ ಚಿಕಿತ್ಸೆ ಪಡೆಯುತ್ತಿದ್ದಾರೆ.