ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿರುವ ಮುಖ್ಯಮಂತ್ರಿ ಸ್ಥಾನ ಬದಲಾವಣೆ ವಿಚಾರಕ್ಕೆ ಮಂಡ್ಯ ಮಾಜಿ ಸಂಸದೆ ಹಾಗೂ ಬಿಜೆಪಿ ನಾಯಕಿ ಸುಮಲತಾ ಅಂಬರೀಷ್ ಪ್ರತಿಕ್ರಿಯೆ ನೀಡಿದ್ದಾರೆ.ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಸಕ್ರಿಯ ಚುನಾವಣಾ ರಾಜಕೀಯದಿಂದ ಹಿಂದೆ ಸರಿದಿರುವುದು ಈಗ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಮತ್ತೊಂದೆಡೆ ಡಿಕೆ ಶಿವಕುಮಾರ್ ಮುಂದಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಸಾಧ್ಯತೆಗಳ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆಗಳು ಜೋರಾಗಿವೆ.
ಈ ಬೆಳವಣಿಗೆ ಕುರಿತು ಮದ್ದೂರಿನಲ್ಲಿ ಮಾತನಾಡಿದ ಸುಮಲತಾ ಅಂಬರೀಷ್, “ಸಿದ್ದರಾಮಯ್ಯ ರಾಜೀನಾಮೆ ನೀಡುತ್ತಾರೆ ಎಂಬ ನಿರೀಕ್ಷೆ ಎಲ್ಲರಲ್ಲೂ ಇತ್ತು. ಕಳೆದ ಎರಡು ವರ್ಷಗಳಿಂದಲೇ ಈ ಕುರಿತು ಚರ್ಚೆಗಳು ನಡೆಯುತ್ತಿವೆ. ಹೀಗಾಗಿ ಇದು ಅಚ್ಚರಿ ಮೂಡಿಸುವ ವಿಷಯವಲ್ಲ” ಎಂದು ಹೇಳಿದರು.“ಯಾರು ಮುಖ್ಯಮಂತ್ರಿ ಆದರೂ ಜನರಿಗೆ ಉತ್ತಮ ಆಡಳಿತ ನೀಡುವುದು ಮುಖ್ಯ. ರಾಜ್ಯದ ಜನರು ಅದನ್ನೇ ನಿರೀಕ್ಷಿಸುತ್ತಾರೆ” ಎಂದು ಅವರು ಅಭಿಪ್ರಾಯಪಟ್ಟರು.
ದಲಿತ ಸಿಎಂ ಆಯ್ಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಸುಮಲತಾ, “ಅದು ಕಾಂಗ್ರೆಸ್ ಪಕ್ಷದ ಒಳಗಿನ ವಿಚಾರ. ಕಾಂಗ್ರೆಸ್ ತಮ್ಮನ್ನು ಅಲ್ಪಸಂಖ್ಯಾತರ ಪರ ಪಕ್ಷ ಎಂದು ಹೇಳಿಕೊಳ್ಳುತ್ತದೆ. ಆ ವಿಚಾರವನ್ನು ಅವರು ಹೇಗೆ ನಿರ್ವಹಿಸುತ್ತಾರೆ ಎನ್ನುವುದು ಅವರಿಗೆ ಬಿಟ್ಟದ್ದು” ಎಂದು ಹೇಳಿದರು.
“ಈ ಸರ್ಕಾರ ಪೂರ್ಣ ಅವಧಿ ಪೂರೈಸುತ್ತದೆಯೋ ಇಲ್ಲವೋ ಎಂಬುದರ ಬಗ್ಗೆ ಈಗಲೇ ಹೇಳಲು ಸಾಧ್ಯವಿಲ್ಲ. ನಾಯಕತ್ವ ಬದಲಾವಣೆ ಹೊಸದೇನಲ್ಲ, ಅದರಲ್ಲಿ ತಪ್ಪೇನೂ ಇಲ್ಲ. ಜನರು ಇಂತಹ ಬದಲಾವಣೆಗಳನ್ನು ಸ್ವೀಕರಿಸುತ್ತಾರೆ” ಎಂದು ಅವರು ತಿಳಿಸಿದರು.
ಇದೇ ವೇಳೆ ಪುತ್ರ ಅಭಿಷೇಕ್ ಅಂಬರೀಷ್ ರಾಜಕೀಯ ಪ್ರವೇಶದ ಬಗ್ಗೆ ಮಾತನಾಡಿದ ಸುಮಲತಾ, “ಅಭಿಷೇಕ್ ಯಾವ ಕ್ಷೇತ್ರಕ್ಕೆ ಹೋಗಬೇಕು ಎನ್ನುವುದನ್ನು ನಾನು ನಿರ್ಧರಿಸುವುದಿಲ್ಲ. ಸಿನಿಮಾ ಅಥವಾ ರಾಜಕೀಯ ಯಾವುದು ಬೇಕಾದರೂ ಆಯ್ಕೆ ಮಾಡಬಹುದು. ಅದು ಅವರ ವೈಯಕ್ತಿಕ ನಿರ್ಧಾರ” ಎಂದು ಹೇಳಿದರು.“ನಾನು ಬಿಜೆಪಿ ಪಕ್ಷದಲ್ಲಿದ್ದೇನೆ. ಪಕ್ಷ ಯಾವ ರೀತಿಯ ಸೂಚನೆ ನೀಡುತ್ತದೆಯೋ ಅದರಂತೆ ನಡೆದುಕೊಳ್ಳುತ್ತೇನೆ” ಎಂದು ಸುಮಲತಾ ಅಂಬರೀಷ್ ಹೇಳಿದರು.


















