ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಜೊತೆ 1992ರಲ್ಲಿ ಬಿಡುಗಡೆಯಾದ ಹಳ್ಳಿಮೇಷ್ಟ್ರು ಚಿತ್ರದಲ್ಲಿ ಮಿಂಚಿದ್ದ ಬಿಂದಿಯಾ ಉರ್ಫ್ ಫರ್ಹೀನ್ ಬಾಲಿವುಡ್, ಕನ್ನಡ ಮತ್ತು ತಮಿಳು ಚಿತ್ರರಂಗದಲ್ಲಿ ಕೆಲಸ ಮಾಡಿದರು. ಮಾಧುರಿ ದೀಕ್ಷಿತ್ ಅವರನ್ನು ಹೋಲುವ ಅವರ ಗಮನಾರ್ಹ ಲುಕ್ಕು ಅಪಾರ ಅಭಿಮಾನಿಗಳನ್ನು ಗಳಿಸುವಂತೆ ಮಾಡಿತು. ಅವರ ಮೊದಲ ಚಿತ್ರದ ನಂತರ, ಫರ್ಹೀನ್ ಜನಪ್ರಿಯತೆ ಗಳಿಸಿದರು ಮತ್ತು ಮಾಧ್ಯಮಗಳಲ್ಲಿ ‘ಮಾಧುರಿ ದೀಕ್ಷಿತ್ ಅವರ ನಂ.2’ ಆಗಿದ್ದರು. ಅಂಥ ಬಿಂದಿಯಾ ರವಿಚಂದ್ರನ್ ಅವರ ಮೇಲೆಯೇ ರೇ*ಪ್ ಕೇಸ್ ಆರೋಪ ಮಾಡಿಬಿಟ್ಟಿದ್ದರು. ಹಳ್ಳಿಮೇಷ್ಟ್ರು ಸಿನಿಮಾದಲ್ಲಿ ಪರಿಮಳಾ ಪಾತ್ರದಲ್ಲಿ ಹೀರೋಯಿನ್ ಆಗಿದ್ದ ಬಿಂದಿಯಾ, ಈ ಚಿತ್ರದಿಂದ ರಾತ್ರೋರಾತ್ರಿ ದಕ್ಷಿಣದಲ್ಲಿಯೂ ಸ್ಟಾರ್ ಆದರು. ಈ ಚಿತ್ರ ಸಕತ್ ಹಿಟ್ ಆಗಿತ್ತು. ತಮಿಳಿನಲ್ಲಿಯೂ ಡಬ್ ಆದ ಚಿತ್ರವಿದು. ಆದರೆ, ಈ ಸಮಯದಲ್ಲಿಯೇ ಬಿಂದಿಯಾ ರವಿಚಂದ್ರನ್ ತಮ್ಮ ಮೇಲೆ ಅತ್ಯಾ*ಚಾರ ಮಾಡಲು ಟ್ರೈಮಾಡಿದ್ರು ಎಂದು ಹೇಳಿ ಹಲ್ಚಲ್ ಸೃಷ್ಟಿಸಿದ್ದರು. ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಈ ರೀತಿ ಹೇಳಿದ್ದ ನಟಿಯ ಮಾತಿಗೆ ರವಿಚಂದ್ರನ್ ಶಾಕ್ ಆಗಿಹೋಗಿದ್ದರು. ಇದೇ ಕಾರಣಕ್ಕೆ ಅವರು ನಟಿಯ ವಿರುದ್ಧ ಕೇಸ್ ಹಾಕಿದ್ದರು ಎನ್ನಲಾಗಿತ್ತು.
ಈ ಕುರಿತು ತಮ್ಮ ಮೇಲೆ ಮಾಡಿರುವ ಆರೋಪವನ್ನ ಸಾಬೀತು ಪಡಿಸುವಂತೆ ಸವಾಲು ಹಾಕಿ ಬಿಂದಿಯಾ ವಿರುದ್ಧ ರವಿಚಂದ್ರನ್ ಒಂದು ರೂಪಾಯಿಗೆ ಮಾನನಷ್ಟ ಮೊಕದ್ದಮೆ ಹಾಕಿದ್ದು ಆಗ ಭಾರಿ ಸದ್ದು ಮಾಡಿತ್ತು. ಆಗ ನಟಿ ವಿಚಾರಣೆ ವೇಳೆ ನಾನು ಹೇಳಿದ್ದೇ ಬೇರೆ, ಮಾಧ್ಯಮಗಳಲ್ಲಿ ಬಂದಿದ್ದೆ ಬೇರೆ, ನನ್ನ ಮೇಲೆ ಹೀಗೆಲ್ಲಾ ನಟ ಮಾಡಿಲ್ಲ ಎಂದಿದ್ದರು. ಆ ವಿಷ್ಯ ಆಮೇಲೆ ಅಲ್ಲಿಗೇ ತಣ್ಣಗಾಗಿತ್ತು. ಆದರೆ ಘಟನೆ ನಡೆದು ಈಗ 34 ವರ್ಷವಾಗಿದೆ. ಇದೀಗ ಮತ್ತೊಮ್ಮೆ ನಟಿ ಬಿಂದಿಯಾ ಬಹಿರಂಗವಾಗಿ ಕ್ಷಮೆ ಕೋರಿದ್ದಾರೆ. ತಾವು ಅಂದು ಮಾಡಿದ್ದು ತಪ್ಪು ಎಂದು ನಟ, ನಿರ್ದೇಶಕ ರಘುರಾಮ್ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಕಣ್ಣೀರು ಹಾಕಿದ್ದಾರೆ ಬಿಂದಿಯಾ. ನಾನು ‘‘ಜಾನ್ ತೇರೆ ನಾಮ್’ ಸಿನಿಮಾದಲ್ಲಿ ನಟಿಸಿದ್ದೆ. ಅದು ಸೂಪರ್ ಹಿಟ್ ಅಗಿತ್ತು. ಆಗ ರವಿ ಸರ್ ಬಾಂಬೆಯಲ್ಲಿದ್ದರು. ‘ಹಳ್ಳಿಮೇಷ್ಟ್ರು’ ಸಿನಿಮಾಗೆ ನಾಯಕಿಗಾಗಿ ಹುಡುಕಾಟ ನಡೆಸುತ್ತಿದ್ದರು. ನನ್ನನ್ನು ಆಯ್ಕೆ ಮಾಡಲಾಗಿತ್ತು ಎನ್ನುತ್ತ, ರೇ*ಪ್ ಬಗ್ಗೆ ನಾನು ಹೇಳಲಿಲ್ಲ. ನಾನು ಹೇಳಿದ್ದೇ ಒಂದು, ಅವರು ಬರೆದದ್ದೇ ಇನ್ನೊಂದು ಎಂದು ಕ್ಷಮೆ ಕೋರಿ ಕಣ್ಣೀರಾಗಿದ್ದಾರೆ. ನನ್ನ ಹೇಳಿಕೆಯನ್ನ ಮ್ಯಾಗಝೀನ್‌ನವರು ತಿರುಚಿದ್ದರು. ಇದರಿಂದ ರವಿ ಸರ್‌ಗೆ ಬಂದ ಇಂಪ್ರೆಷನ್ ಸಹ ಕೆಟ್ಟದಾಗಿತ್ತು. ಇದು ನನ್ನ ತಪ್ಪು ಖಂಡಿತ ಅಲ್ಲ.. ರವಿಚಂದ್ರನ್ ಸರ್ ಬಗ್ಗೆ ನಾನು ಯಾವುದೇ ರೀತಿಯ ತಪ್ಪು ಹೇಳಿಕೆ ನೀಡಿರಲಿಲ್ಲ. ಐ ಆಮ್ ಸಾರಿ ಎಲ್ಲರಿಗೂ’’ ಎಂದಿದ್ದಾರೆ ನಟಿ ಎನ್ನಲಾಗುತ್ತಿದೆ.


















