ಮನೆ ಸುದ್ದಿ ಜಾಲ ಆನ್‌ಲೈನ್ ಗೇಮಿಂಗ್ ನಿಷೇಧ ಕಾನೂನಿಗೆ ಸುಪ್ರೀಂ ಕೋರ್ಟ್ ಬೆಂಬಲ

ಆನ್‌ಲೈನ್ ಗೇಮಿಂಗ್ ನಿಷೇಧ ಕಾನೂನಿಗೆ ಸುಪ್ರೀಂ ಕೋರ್ಟ್ ಬೆಂಬಲ

0

ಬೆಂಗಳೂರು, ಮೇ 29: ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೆ ತರಲಾಗಿದ್ದ ಆನ್ಲೈನ್ ಗೇಮಿಂಗ್ ನಿಷೇಧ ಕಾನೂನಿಗೆ ಸುಪ್ರೀಂ ಕೋರ್ಟ್ ಬೆಂಬಲ ನೀಡಿರುವುದನ್ನು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಸ್ವಾಗತಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಬಸವರಾಜ ಬೊಮ್ಮಾಯಿ, ತಮ್ಮ ನೇತೃತ್ವದ ಸರ್ಕಾರ ಆನ್ಲೈನ್ ಗ್ಯಾಂಬ್ಲಿಂಗ್ ವಿರುದ್ಧ ಕಠಿಣ ಕಾನೂನು ಜಾರಿಗೆ ತಂದಿತ್ತು ಎಂದು ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಜೆಬಿ ಪರ್ಡಿವಾಲಾ ಮತ್ತು ಆರ್. ಮಹದೇವನ್ ಅವರನ್ನೊಳಗೊಂಡ ಪೀಠ ಕರ್ನಾಟಕ ಸರ್ಕಾರ ಜಾರಿಗೆ ತಂದಿದ್ದ ಆನ್ಲೈನ್ ಗೇಮಿಂಗ್ ನಿಯಂತ್ರಣ ಕಾನೂನನ್ನು ಎತ್ತಿ ಹಿಡಿದಿದೆ ಎಂದು ಅವರು ಹೇಳಿದ್ದಾರೆ.

ತಮ್ಮ ಸರ್ಕಾರದ ಅವಧಿಯಲ್ಲಿ ಕರ್ನಾಟಕ ಪೊಲೀಸ್ ತಿದ್ದುಪಡಿ ಕಾಯ್ದೆ 2021 ಜಾರಿಗೆ ತರಲಾಗಿತ್ತು. ಈ ಮೂಲಕ ಕರ್ನಾಟಕ ಪೊಲೀಸ್ ಕಾಯ್ದೆ 1963ರಲ್ಲಿ ಹಲವು ಬದಲಾವಣೆ ಮಾಡಿ, ಗ್ಯಾಂಬ್ಲಿಂಗ್ ವ್ಯಾಖ್ಯಾನವನ್ನು ವಿಸ್ತರಿಸಿ, ಆನ್ಲೈನ್ ಗೇಮಿಂಗ್ ಅನ್ನು ಜಾಮೀನು ರಹಿತ ಅಪರಾಧವೆಂದು ಪರಿಗಣಿಸುವಂತೆ ತಿದ್ದುಪಡಿ ಮಾಡಲಾಗಿತ್ತು ಎಂದು ವಿವರಿಸಿದ್ದಾರೆ.

ಆನ್ಲೈನ್ ಗೇಮಿಂಗ್ ಮತ್ತು ಗ್ಯಾಂಬ್ಲಿಂಗ್ ಮೇಲೆ ಸಂಪೂರ್ಣ ನಿಯಂತ್ರಣ ತರಲು ಈ ಕಾನೂನು ರೂಪಿಸಲಾಗಿತ್ತು. ಆದರೆ ಬಳಿಕ ಹೈಕೋರ್ಟ್ ಈ ಕಾನೂನಿಗೆ ತಡೆ ನೀಡಿತ್ತು. ಅದರ ವಿರುದ್ಧ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು ಎಂದು ಬೊಮ್ಮಾಯಿ ತಿಳಿಸಿದ್ದಾರೆ.

ಈಗ ಸುಪ್ರೀಂ ಕೋರ್ಟ್ ಕರ್ನಾಟಕ ಹಾಗೂ ತಮಿಳುನಾಡಿನ ಕಾನೂನುಗಳನ್ನು ಮಾನ್ಯಗೊಳಿಸಿರುವುದು ಆನ್ಲೈನ್ ಗೇಮಿಂಗ್‌ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದ ಜನರನ್ನು ರಕ್ಷಿಸುವ ಪ್ರಯತ್ನಕ್ಕೆ ದೊರೆತ ಜಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

“ಆನ್ಲೈನ್ ಗೇಮಿಂಗ್‌ನಿಂದ ಅನೇಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದವು. ಕೆಲವರು ಆರ್ಥಿಕ ನಷ್ಟದಿಂದ ಆತ್ಮಹತ್ಯೆಗೂ ಮುಂದಾಗಿದ್ದರು. ಇಂತಹ ಅನಾಹುತಗಳನ್ನು ತಡೆಯುವ ಉದ್ದೇಶಕ್ಕೆ ಸುಪ್ರೀಂ ಕೋರ್ಟ್ ಆದೇಶ ಬಲ ನೀಡಿದೆ” ಎಂದು ಹೇಳಿದ್ದಾರೆ.

ಪ್ರಸ್ತುತ ರಾಜ್ಯ ಸರ್ಕಾರ ಈ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಆನ್ಲೈನ್ ಗೇಮಿಂಗ್ ನಿಯಂತ್ರಿಸಿ ಕುಟುಂಬಗಳು ಸಂಕಷ್ಟಕ್ಕೆ ಒಳಗಾಗುವುದನ್ನು ತಪ್ಪಿಸಬೇಕು ಎಂದು ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.