ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹಾಗೂ ಹೆಸರಾಂತ ನಟ ವಿಜಯ್ ದೇವರಕೊಂಡ ವಿವಾಹವು ರಾಜಸ್ಥಾನದ ಉದಯಪುರದಲ್ಲಿ ಅದ್ಧೂರಿಯಾಗಿ ನಡೆದಿದೆ. ಬೆಳಗ್ಗೆ 8 ಗಂಟೆಗೆ ನಡೆದ ಶುಭ ಮುಹೂರ್ತದಲ್ಲಿ ವಿರೋಶ್ ಜೋಡಿ ಹೊಸ ಜೀವನಕ್ಕೆ ಕಾಲಿಟ್ಟಿದೆ. ಕುಟುಂಬಸ್ಥರು ಮತ್ತು ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು.
ಹಲವು ವರ್ಷಗಳಿಂದ ಕದ್ದು ಮುಚ್ಚಿ ಪ್ರೀತಿಸ್ತಾ ಇದ್ದ ಜೋಡಿ, ಇದೀಗ ಆಪ್ತರ ಮುಂದೆಯೇ ಹೊಸ ಜೀವನಕ್ಕೆ ಕಾಲಿಟ್ಟಿದೆ. ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಹಾಗೂ ತೆಲುಗಿನ ಖ್ಯಾತ ನಟ ವಿಜಯ್ ದೇವರಕೊಂಡ ರಾಜಸ್ಥಾನದ ಉದಯಪುರದಲ್ಲಿ ಹಸೆಮಣೆ ಏರಿದ್ದಾರೆ. ಬೆಳಗ್ಗೆ ನಡೆದ ಶುಭ ಮುಹೂರ್ತದಲ್ಲಿ ಈ ಜೋಡಿ ಸಪ್ತಪದಿ ತುಳಿದಿದೆ. ಈ ತಾರಾ ಮದ್ವೆಗೆ ಕೆಲವೇ ಕೆಲವು ವ್ಯಕ್ತಿಗಳಿಗೆ ಆಹ್ವಾನ ನೀಡಲಾಗಿತ್ತು. ಹಾಗಾಗಿ ಕುಟುಂಬಸ್ಥರು ಮತ್ತು ಆಪ್ತರು ಈ ಮದ್ವೆಗೆ ಸಾಕ್ಷಿಯಾಗಿದ್ದಾರೆ.
ಹಲವಾರು ವರ್ಷಗಳಿಂದ ಪ್ರೀತಿ, ಪ್ರೇಮ ಅಂತೆಲ್ಲ ಸುತ್ತಾಡುತ್ತಿದ್ದ ಜೋಡಿ, ಇತ್ತೀಚೆಗಷ್ಟೇ ಕದ್ದುಮುಚ್ಚಿ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಮದುವೆ ಕೂಡ ಹಾಗೆಯೇ ನಡೆಯಲಿದೆ ಅನ್ನುವ ಸುದ್ದಿ ಹರಿದಾಡುತ್ತಿತ್ತು. ಆದರೆ, ಮದುವೆಗೆ ಕೆಲವರಿಗೆ ಮಾತ್ರ ಆಹ್ವಾನ ನೀಡಿ ಅದ್ಧೂರಿಯಾಗಿಯೇ ರಶ್ಮಿಕಾ ಮತ್ತು ವಿಜಯ್ ಮದುವೆಯಾಗಿದ್ದಾರೆ. ಮೂರು ದಿನಗಳ ಕಾಲ ನಡೆಯುತ್ತಿರುವ ಅದ್ಧೂರಿ ಮದುವೆಗೆ ಈಗಾಗ್ಲೇ ರವಿತೇಜ, ಸಂದೀಪ್ ರೆಡ್ಡಿ ವಂಗಾ, ಆಶಿಕಾ ರಂಗನಾಥ್ ಹಾಗೂ ರಶ್ಮಿಕಾ ಗೆಳತಿಯರು ಉಪಸ್ಥಿತರಿದ್ದಾರೆ.
ಕಳೆದ ಮೂರು ದಿನಗಳಿಂದ ಶಾಸ್ತ್ರಗಳು ನಡೆಯುತ್ತಿದ್ದು, ಹಳದಿ ಶಾಸ್ತ್ರ, ಮೆಹಂದಿ, ಸಂಗೀತ ಹೀಗೆ ಪಕ್ಕಾ ಪ್ಲ್ಯಾನ್ ಮಾಡಿಕೊಂಡೇ ಉದಯಪುರಕ್ಕೆ ಹಾರಿತ್ತು ಜೋಡಿ. ಇವತ್ತು ದೇವರಕೊಂಡ ಸಮುದಾಯಕ್ಕೂ ಆಂಧ್ರದಲ್ಲಿ ವಿಶೇಷ ಸಂಪ್ರದಾಯವಿರೋದ್ರಿಂದ ಮುಂಜಾನೆಯ ಮುಹೂರ್ತದಲ್ಲಿ ವಿಜಯ್ ಮನೆತನದ ಸಂಪ್ರದಾಯದಂತೆ ಮದುವೆಯಾಗಿದೆ. ಇನ್ನು ಕೊಡವ ಸಂಪ್ರದಾಯವನ್ನೂ ಗೌರವಿಸಲು ಮುಂದಾದ ವಿಜಯ್ ಕುಟುಂಬಸ್ಥರು ಇವತ್ತೇ ಸಂಜೆ ರಶ್ಮಿಕಾ ಕುಟುಂಬದ ಸಂಪ್ರದಾಯದಂತೆ ಕೊಡವ ಸಂಪ್ರದಾಯದಲ್ಲೂ ಮದುವೆಯಾಗಲಿದ್ದಾರೆ.
ಮಾರ್ಚ್ 4 ರಂದು ಆರತಕ್ಷತೆ ನಡೆಯಲಿದ್ದು, ಕನ್ನಡ ಸಿನಿಮಾ ರಂಗದಿಂದಲೂ ಹಲವರು ಇದರಲ್ಲಿ ಭಾಗಿಯಾಗಲಿದ್ದಾರೆ. ಸ್ಯಾಂಡಲ್‌ವುಡ್‌ನಿಂದ ಶಿವರಾಜ್ ಕುಮಾರ್, ಹಾಗೂ ಪುನೀತ್ ರಾಜ್‌ಕುಮಾರ್ ಕುಟುಂಬ, ಗಣೇಶ್, ಧ್ರುವ ಸರ್ಜಾ, ಯಶ್ ಹಾಗೂ ಕಿಚ್ಚ ಸುದೀಪ್‌ಗೂ ರಶ್ಮಿಕಾ ಕರೆ ಮಾಡಿ ಆಹ್ವಾನಿಸಿದ್ದಾರಂತೆ. ಡೆಸ್ಟಿನೇಷನ್ ವೆಡ್ಡಿಂಗ್‌ನಲ್ಲಿ ಲಿಮಿಟೆಡ್ ಗೆಸ್ಟ್… ಸೆಲೆಕ್ಟೆಡ್ ಫುಡ್… ಫುಲ್ಲೀಪ್ಲ್ಯಾನ್ಡ್ ಮಾಡಿ ಈ ಜೋಡಿ ಮದುವೆಯಾಗಿದೆ. ಇಬ್ಬರೂ ತಮ್ಮ ಕನಸಿನಂತೆ ಸತಿಪತಿಯಾಗಿದ್ದಾರೆ. ಈ ಮೂಲಕ ತೆರೆಯ ಹಿಂದೆ ನಿರ್ದೇಶಕನ ಕಲ್ಪನೆಯಲ್ಲಾದ ಜೋಡಿಯನ್ನ ವಿಧಿಯೂ ಸೇರಿಸಿಯಾಗಿದೆ.
ಕಳೆದ ಮೂರು ದಿನಗಳಿಂದ ಮದುವೆ ಶಾಸ್ತ್ರಗಳು ಪ್ರಾರಂಭವಾಗಿದ್ದು ಶಾಸ್ತ್ರದ ಸಣ್ಣ ಸಣ್ಣ ಝಲಕ್‌ನ್ನ ಎರಡೂ ಕುಟುಂಬಗಳು ಹಂಚಿಕೊಳ್ಳುತ್ತಿವೆ. ಒಟ್ಟಾರೆಯಾಗಿ ರಶ್ಮಿಕಾ ಮದುವೆ ಈ ವರ್ಷದ ಬಲು ಚರ್ಚಿತ ಹಾಗೂ ಅದ್ಧೂರಿ ಮದುವೆಯಾಗಿ ಹೊರಹೊಮ್ಮಿದೆ.














