ಮನೆ ರಾಷ್ಟ್ರೀಯ ಅಮ್ಮನಿಗೆ ಸಂದೇಶ ಕಳುಹಿಸಿ ನೇಣಿಗೆ ಕೊರಳೊಡ್ಡಿದ ಯೂಟ್ಯೂಬರ್..!

ಅಮ್ಮನಿಗೆ ಸಂದೇಶ ಕಳುಹಿಸಿ ನೇಣಿಗೆ ಕೊರಳೊಡ್ಡಿದ ಯೂಟ್ಯೂಬರ್..!

0

ಹೈದರಾಬಾದ್ : ಬಿಎಸ್ಸಿ ಪದವೀಧರೆಯೂ ಆಗಿರುವ 21 ವರ್ಷದ ಯೂಟ್ಯೂಬರ್‌ ಬೋನು ಕೋಮಲಿ ಇತ್ತೀಚೆಗೆ (ಫೆ.23) ಹೈದರಾಬಾದ್‌ನಲ್ಲಿರುವ ತನ್ನ ಬಾಡಿಗೆ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸಾವಿಗೂ ಮುನ್ನ ಕುವೈತ್‌ನಲ್ಲಿರುವ ತನ್ನ ತಾಯಿಗೆ ʻಐ ಲವ್‌ ಯುʼ ಸಂದೇಶ ಕಳುಹಿಸಿರೋದು ಬೆಳಕಿಗೆ ಬಂದಿದೆ.

ಆಂಧ್ರ ಪ್ರದೇಶದ ವಿಶಾಖಪಟ್ಟಂ ನಿವಾಸಿಯೂ ಆಗಿರುವ ಕೋಮಲಿ, ಹೈದರಾಬಾದ್‌ನ ಖಾಸಗಿ ಕಾಲೇಜಿನಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದರು, ಹೀಗಾಗಿ 11 ತಿಂಗಳಿಂದ ಅಪಾರ್ಟ್‌ಮೆಂಟ್‌ನಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು. ಶಿಕ್ಷಣದ ಜೊತೆಗೆ ಯೂಟ್ಯೂಬ್‌ನಲ್ಲಿ ಲೈಫ್‌ಸ್ಟೈಲ್‌ ಮತ್ತು ವೈಯಕ್ತಿಕ ವಿಷಯಗಳ ಕುರಿತು ಕಂಟೆಂಟ್‌ ಕ್ರಿಯೇಟ್‌ ಮಾಡುತ್ತಿದ್ದರು.

ಪೊಲೀಸರ ಪ್ರಕಾರ, ಸೋಮವಾರ (ಫೆ.23) ಮುಂಜಾನೆ ಕೋಮಲಿ ಕುವೈತ್‌ನಲ್ಲಿ ಕೆಲಸ ಮಾಡುತ್ತಿರುವ ತನ್ನ ತಾಯಿ ಬಿ ಸತ್ಯ ವರಲಕ್ಷ್ಮಿಗೆ ʻಐ ಲವ್ ಯು ಮಾಮ್ ಸೋ ಮಚ್ʼ ಎಂದು ಸಂದೇಶ ಕಳುಹಿಸಿದ್ದಾರೆ. ಜೊತೆಗೆ ತನ್ನ ಕಿರಿಯ ಸಹೋದರನನ್ನ ನೋಡಿಕೊಳ್ಳುವಂತೆ ಕೇಳಿಕೊಂಡಿದ್ದಾರೆ. ಮೆಸೇಜ್‌ ಕಳುಹಿಸಿದ ಬಳಿಕ ಫೋನ್‌ ಸ್ವಿಚ್‌ ಆಫ್‌ ಆಗಿದೆ. ವಾಪಸ್‌ ಎಷ್ಟು ಕರೆ ಮಾಡಿದ್ರೂ ಸಂಪರ್ಕಕ್ಕೆ ಸಿಗದ ಕಾರಣ ಕೋಮಲಿ ತಾಯಿ ಮಧ್ಯಾಹ್ನ ತನ್ನ ಫ್ಲಾಟ್‌ಗೆ ಬಂದು ಸ್ನೇಹಿತರಿಗೆ ವಿಷಯ ತಿಳಿಸಿದ್ದಾರೆ.

ನಂತರ ಫೆ.23 ರ ಸೋಮವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಕೋಮಲಿ ಫ್ಲಾಟ್‌ ಬಳಿ ಬಂದು ಬಾಗಿಲು ಬಡಿದಿದ್ದಾರೆ. ಬಹಳ ಹೊತ್ತು ಯಾವುದೇ ಪ್ರತಿಕ್ರಿಯೆ ಬರದೇ ಇದ್ದರಿಂದ ಬೀಗ ಒಡೆದು ಒಳಗೆ ಹೋಗಿದ್ದಾರೆ. ತಕ್ಷಣವೇ ಅಲ್ಲಿ ಸೀಲಿಂಗ್‌ ಫ್ಯಾನ್‌ಗೆ ಬಿಗಿದ ಸ್ಥಿತಿಯಲ್ಲಿ ಮಗಳ ಶವ ನೇತಾಡುತ್ತಿದ್ದದ್ದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳದಲ್ಲಿ ಒಂದು ಏಣಿ ಮತ್ತು ಸೀರೆ ಪತ್ತೆಯಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ದೀರ್ಘಕಾಲದಿಂದ ಆಕೆ ಮಾನಸಿಕ ಹಿಂಸೆ ಅನುಭವಿಸುತ್ತಿದ್ದರು ಎನ್ನಲಾಗಿದೆ.

ಮತ್ತೊಂದು ಮೂಲಗಳ ಪ್ರಕಾರ, ಕೋಮಲಿ 27 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಮತ್ತು ಸಹ ಯೂಟ್ಯೂಬರ್ ಜೊತೆ 3 ವರ್ಷಗಳ ಕಾಲ ಸಂಬಂಧದಲ್ಲಿದ್ದಳು. ನಂತರ ಇಬ್ಬರು ಬೇರ್ಪಟ್ಟಿದ್ದರು. 6 ತಿಂಗಳ ಮೊದಲು ಆತ್ಮಹತ್ಯೆಗೆ ಯತ್ನಿಸಿದ್ದಳು. ಸದ್ಯ ಅನುಮಾನಾಸ್ಪದ ಸಾವು ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಶವ ಪರೀಕ್ಷೆಗಾಗಿ ಕೋಮಲಿ ಮೃತದೇಹವನ್ನ ಉಸ್ಮಾನಿಯಾ ಜನರಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.