ಮಂಡ್ಯ : ಮಾಹಿತಿ ಹಕ್ಕು ಕಾಯಿದೆಯಡಿ ಸಾರ್ವಜನಿಕರು ಕೇಳಿದ ಮಾಹಿತಿಯನ್ನು ನೀಡದೆ ನಿರ್ಲಕ್ಷ್ಯ ವಹಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಈಗ ಇಲಾಖಾ ತನಿಖೆ ಹಾಗೂ ಶಿಸ್ತು ಕ್ರಮಕ್ಕೆ ಆದೇಶಿಸಲಾಗಿದೆ. ಮಳವಳ್ಳಿಯ ನಾಗರಾಜು ಎಂಬುವವರು 2022ರಲ್ಲಿ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯ ಸಿಸಿಟಿವಿ ದೃಶ್ಯಾವಳಿ ಕೋರಿ ಆರ್ಟಿಐ ಅರ್ಜಿ ಸಲ್ಲಿಸಿದ್ದರು.
ಆದರೆ, ಅಂದಿನ ಮಳವಳ್ಳಿ ಡಿವೈಎಸ್ಪಿ ನವೀನ್ ಕುಮಾರ್ ಅರ್ಜಿಯನ್ನು ವರ್ಗಾಯಿಸದೆ, ಮಾಹಿತಿಯನ್ನು ನೀಡಲು ಬರುವುದಿಲ್ಲ ಎಂದು ಹಿಂಬರಹ ನೀಡಿದ್ದರು. ಇದರ ವಿರುದ್ಧ ಮಂಡ್ಯದ ಅಂದಿನ ಎಸ್ಪಿ ಎನ್. ಯತೀಶ್ ಅವರಿಗೆ ಮೇಲ್ಮನವಿ ಸಲ್ಲಿಸಿದರೂ, ಅವರು ಯಾವುದೇ ವಿಚಾರಣೆ ನಡೆಸದೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದರು.
ಈ ಬಗ್ಗೆ ಎರಡನೇ ಮೇಲ್ಮನವಿ ವಿಚಾರಣೆ ನಡೆಸಿದ ಮಾಹಿತಿ ಆಯೋಗದ ಆಯುಕ್ತ ರುದ್ರಣ್ಣ ಹರ್ತಿಕೋಟೆ, ಇಬ್ಬರೂ ಅಧಿಕಾರಿಗಳ (ಎನ್. ಯತೀಶ್ ಮತ್ತು ನವೀನ್ ಕುಮಾರ್) ವಿರುದ್ಧ ಇಲಾಖಾ ವಿಚಾರಣೆ ನಡೆಸಿ ಶಿಸ್ತುಕ್ರಮ ಜರುಗಿಸುವಂತೆ ಡಿಜಿಪಿ ಸಲೀಂ ಅವರಿಗೆ ಸೂಚನೆ ನೀಡಿದ್ದಾರೆ. ಆರ್ಟಿಐ ಅರ್ಜಿಗಳನ್ನು ಲಘುವಾಗಿ ಪರಿಗಣಿಸುವ, ಸಾರ್ವಜನಿಕರನ್ನು ಅಲೆದಾಡಿಸುವ ಸರಕಾರಿ ಅಧಿಕಾರಿಗಳಿಗೆ ಇದೊಂದು ಎಚ್ಚರಿಕೆಯ ಗಂಟೆಯಾಗಿದೆ.















