ಬೆಂಗಳೂರು: ಜಾಮೀನು ಅರ್ಜಿಗೆ ತಕರಾರು ಅರ್ಜಿ ಸಲ್ಲಿಸಲು ದೂರುದಾರರಿಂದ ಬೇಡಿಕೆಯಿಟ್ಟಿದ್ದ 5 ಸಾವಿರ ಲಂಚ ಪಡೆಯುವಾಗ ಮಹಿಳಾ ಪಬ್ಲಿಕ್ ಪ್ರಾಸಿಕ್ಯೂಟರ್ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿರುವ ಪ್ರಕರಣ ನಗರದಲ್ಲಿ ನಡೆದಿದ್ದು ಸವಿತಾ ನವೀನ್ ಪಾಟೀಲ್ ಸಿಕ್ಕಿಬಿದ್ದಿರುವ ಸರ್ಕಾರಿ ವಿಶೇಷ ಅಭಿಯೋಜಕಿ. ನಗರದ ಸಿಸಿಹೆಚ್-54ರ ನ್ಯಾಯಾಲಯದಲ್ಲಿ ಎಸ್ಪಿಪಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇಂದು ಬೆಳಗ್ಗೆ ದೂರುದಾರರಿಂದ 5 ಸಾವಿರ ರೂಪಾಯಿ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ಆತ್ಯಾಚಾರ ಪ್ರಕರಣ ಸಂಬಂಧ ಆರೋಪಿ ವಿರುದ್ಧ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇತ್ತೀಚೆಗೆ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ. ಈ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಎಸ್ಪಿಪಿಗೆ ಕೋರ್ಟ್ ತಿಳಿಸಿತ್ತು. ಪ್ರಕರಣದ ವಿಚಾರಣೆ ಮುಂದುವರೆಸಲು ಸಂತ್ರಸ್ತೆ ಬಳಿ ಸವಿತಾ ಅವರು ಲಂಚ ಕೇಳಿದ್ದರು. ಟೈಪಿಂಗ್ ಸೇರಿದಂತೆ ಇನ್ನಿತರ ಖರ್ಚಿಗಾಗಿ ₹5 ಸಾವಿರ ನೀಡುವಂತೆ ಬೇಡಿಕೆಯಿಟ್ಟಿದ್ದರು. ಈ ಸಂಬಂಧ ಸಂತ್ರಸ್ತೆ ಪರವಾಗಿ ಮಂಜುನಾಥ್ ಎಂಬುವರು ನೀಡಿದ ದೂರಿನ ಮೇರೆಗೆ ಲೋಕಾಯುಕ್ತ ಡಿವೈಎಸ್ಪಿ ಬ್ರಿಜೇಶ್ ಮ್ಯಾಥ್ಯೂ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ಶ್ರೀಕಾಂತ್ ತಂಡವು ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ಧಾರೆ. ಆದರಿಂದ ಪ್ರಕರಣ ಸಂಬಂಧ ಸಾಮಾಜಿಕ ಕಾರ್ಯಕರ್ತ ಸುಭಾಷ್ ಎಂಬುವರು ಮಾತನಾಡಿ, ಜ್ಯೋತಿಷಿಯೊಬ್ಬರು ಮಹಿಳೆ ಮೇಲೆ ಆತ್ಯಾಚಾರವೆಸಗಿದ ಆರೋಪದಡಿ ಕೆಲ ದಿನಗಳ ಹಿಂದೆ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಹಾಗೂ ಇತ್ತೀಚೆಗೆ ಜ್ಯೋತಿಷಿಯೊಬ್ಬರು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಆಕ್ಷೇಪಣೆ ಸಲ್ಲಿಸಲು ಹಾಗೂ ನ್ಯಾಯಾಲಯದ ಮುಂದಿನ ವಿಚಾರಣೆ ಮುನ್ನೆಡೆಸಲು ಎಸ್ಪಿಪಿ ಕೈ ಸನ್ನೆಯಿಂದ 5 ಸಾವಿರ ನೀಡುವಂತೆ ಡಿಮ್ಯಾಂಡ್ ಮಾಡಿದ್ದರು. ಈ ಸಂಬಂಧ ಲೋಕಾಯುಕ್ತ ಅಧಿಕಾರಿಗಳಿಗೆ ನೀಡಿದ ದೂರಿನ ಮೇರೆಗೆ ಇಂದು 5 ಸಾವಿರ ಪಡೆಯುವಾಗ ಎಸ್ಪಿಪಿ ಸಿಕ್ಕಿಬಿದ್ದಿದ್ದಾರೆ ಎನ್ನಲಾಗುತ್ತಿದೆ.

















