ಟೆಲ್ ಅವೀವ್ : ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಇಂದು ಟೆಲ್ ಅವೀವ್ನಲ್ಲಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕಚೇರಿ ಮೇಲೆ ದಾಳಿ ನಡೆಸಿದೆ. ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾಗಿದ್ದಾರೆ.
ಇದಕ್ಕೆ ಪ್ರತೀಕಾರವಾಗಿ ಇಸ್ರೇಲ್ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳ ಮೇಲೆ ಇರಾನ್ ತನ್ನ ದಾಳಿಯನ್ನು ತೀವ್ರಗೊಳಿಸಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ, ಹೈಫಾದಲ್ಲಿನ ಭದ್ರತಾ ಮತ್ತು ಮಿಲಿಟರಿ ಕೇಂದ್ರಗಳು ಹಾಗೂ ಪೂರ್ವ ಜೆರುಸಲೆಮ್ ಮೇಲೆ ದಾಳಿ ಮಾಡಲಾಗಿದೆ.
‘ಜಿಯೋನಿಸ್ಟ್ ಆಡಳಿತದ ಕ್ರಿಮಿನಲ್ ಪ್ರಧಾನಿಯ ಕಚೇರಿ ಮತ್ತು ಆಡಳಿತದ ವಾಯುಪಡೆಯ ಕಮಾಂಡರ್ನ ಪ್ರಧಾನ ಕಚೇರಿಯನ್ನು ಗುರಿಯಾಗಿಸಲಾಗಿತ್ತು’ ಎಂದು ಇರಾನ್ ಹೇಳಿದೆ. ದಾಳಿಯಲ್ಲಿ ಖೈಬರ್ ಕ್ಷಿಪಣಿಗಳನ್ನು ಬಳಸಲಾಗಿದೆ ಎಂದು ತಿಳಿಸಿದೆ.
ಅಮೆರಿಕ-ಇಸ್ರೇಲಿ ಏರ್ಸ್ಟ್ರೈಕ್ನಿಂದ ಇರಾನ್ನಲ್ಲಿ ಇದುವರೆಗೆ ಕನಿಷ್ಠ 555 ಜನರು ಸಾವನ್ನಪ್ಪಿದ್ದಾರೆ ಎಂದು ಇರಾನಿನ ರೆಡ್ ಕ್ರೆಸೆಂಟ್ ಸೊಸೈಟಿ ತಿಳಿಸಿದೆ. ಶನಿವಾರದಿಂದ ಇಸ್ರೇಲ್ ಮತ್ತು ಅಮೆರಿಕ ಇರಾನ್ನಾದ್ಯಂತ ದಾಳಿಗಳನ್ನು ನಡೆಸಿವೆ. ಖಮೇನಿ ಹತ್ಯೆಯೊಂದಿಗೆ ಪ್ರಾರಂಭವಾದ ಯುದ್ಧವು ಈ ಪ್ರದೇಶವನ್ನು ಆವರಿಸಿದೆ. ದುಬೈ, ಬಹ್ರೇನ್, ಇರಾಕ್ ಮತ್ತು ಇತರೆಡೆಗಳಲ್ಲಿ ಸ್ಫೋಟಗಳ ಸದ್ದು ಮೊಳಗುತ್ತಿವೆ.
ಕುವೈತ್ನಲ್ಲಿರುವ ಯುಎಸ್ ರಾಯಭಾರ ಕಚೇರಿಯಿಂದ ಕಪ್ಪು ಹೊಗೆ ಹೊರಹೊಮ್ಮಿದೆ. ಆದರೆ, ಯುಎಸ್ ಯುದ್ಧ ವಿಮಾನಗಳನ್ನು ಇರಾನ್ ಹೊಡೆದುರುಳಿಸಿದ್ದು, ಪೈಲಟ್ಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇರಾನ್ ಕೊಲ್ಲಿಯಲ್ಲಿ ಮೂರನೇ ದಿನ ಪ್ರತೀಕಾರದ ದಾಳಿ ಮುಂದುವರಿದಿದೆ.















