ಮನೆ ರಾಜ್ಯ ಕೈಗಾರಿಕಾ ನೀತಿ ಅಡಿಯಲ್ಲಿ ಎಂಎಸ್‌ಎಂಇ ನೀತಿಗೆ‌ ಹಲವು ಸಲಹೆ..!

ಕೈಗಾರಿಕಾ ನೀತಿ ಅಡಿಯಲ್ಲಿ ಎಂಎಸ್‌ಎಂಇ ನೀತಿಗೆ‌ ಹಲವು ಸಲಹೆ..!

0

ಮೈಸೂರು : ಚಾಮುಂಡಿಬೆಟ್ಟ ರಸ್ತೆಯ ಎಸ್‌ಡಿಎಂ–ಐಎಂಡಿಯಲ್ಲಿ ಆಯೋಜಿಸಿದ್ದ ಮೈಸೂರು ವಿಭಾಗಮಟ್ಟದ ಪಾಲುದಾರರ ಸಮಾಲೋಚನಾ ಸಭೆಯಲ್ಲಿ, ನೀತಿಯು ಹೇಗಿರಬೇಕೆಂಬ ನಿಟ್ಟಿನಲ್ಲಿ ಉದ್ಯಮಿಗಳು ಹಲವು ಸಲಹೆಗಳನ್ನು ನೀಡಿದರು. ಕೈಗಾರಿಕಾ ನೀತಿ– 2025ರ ಅಡಿಯಲ್ಲಿ ಎಂಎಸ್‌ಎಂಇ ಪ್ರೋತ್ಸಾಹ ಮತ್ತು ಸೌಲಭ್ಯಗಳು, ಹಣಕಾಸು ಸೌಲಭ್ಯ, ತಂತ್ರಜ್ಞಾನ ಬಳಕೆ ಹಾಗೂ ಡಿಜಿಟಲೀಕರಣಕ್ಕೆ ಆದ್ಯತೆ, ಮಾರುಕಟ್ಟೆ, ಮೂಲಸೌಕರ್ಯ ಹಾಗೂ ನಿಯಂತ್ರಣಾತ್ಮಕ ನಿಯಮಾವಳಿಗೆ ನೆರವು, ಕೌಶಲ ಅಭಿವೃದ್ಧಿಗೆ ಆದ್ಯತೆ ವಿಷಯದ ಕುರಿತು ವಿವಿಧ ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಿದರು.

ಮಂಡ್ಯ, ಮೈಸೂರು ಹಾಗೂ ಚಾಮರಾಜನಗರ ಸೇರಿದಂತೆ 8 ಜಿಲ್ಲೆಗಳ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಉದ್ಯಮಿಗಳು ಪಾಲ್ಗೊಂಡಿದ್ದರು. ಹೊಸ ನೀತಿಯಲ್ಲಿ ಬಂಡವಾಳಕ್ಕಿರುವ ಸಬ್ಸಿಡಿ, ಮಧ್ಯಮ ಕೈಗಾರಿಕೆಗಳಿಗಿರುವ ಅನುಕೂಲ, ವಿದ್ಯುತ್ ಸಬ್ಸಿಡಿ, ಮುದ್ರಾಂಕ ಶುಲ್ಕದಲ್ಲಿ ನೀಡಿರುವ ವಿನಾಯಿತಿ ಕುರಿತು ಚರ್ಚೆ ನಡೆಸಿದರು. ಕೈಗಾರಿಕಾ ಸಂಘಟನೆಯ ಪ್ರತಿನಿಧಿಗಳು, ನೀತಿಯಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಮನವಿಪತ್ರ ಸಲ್ಲಿಸಿದರು.

ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ನಿರ್ದೇಶಕ ಬಿ.ಸಿ. ಸತೀಶ್ ಮಾತನಾಡಿ, ‘ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಅನುಕೂಲಕ್ಕಾಗಿ ರಾಜ್ಯ ಸರ್ಕಾರವು ಪ್ರತ್ಯೇಕ ನೀತಿ ರೂಪಿಸಲು ನಿರ್ಧರಿಸಿದೆ. ಮೂರು ವಿಭಾಗಗಳಲ್ಲಿ ಸಭೆ ನಡೆಸಿ, ಪಾಲದಾರರ ಸಲಹೆ–ಸೂಚನೆ ಪಡೆಯುವ ‍ಪ್ರಕ್ರಿಯೆ ನಡೆಯುತ್ತಿದೆ. ಅಂತಿಮವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀತಿಗಳ ಬಗ್ಗೆ ಜನರಿಗೆ ತಿಳಿಸಲಿದ್ದಾರೆ’ ಎಂದು ಹೇಳಿದರು.

ಮೈಸೂರಿನಂತಹ ನಗರವನ್ನೂ ತಲುಪಲಿ: ಎಸ್‌ಡಿಎಂ–ಐಎಂಡಿ ಡೀನ್‌ ಮೌಸಮಿ ಸೇನಗುಪ್ತ ಮಾತನಾಡಿ, ‘ಅಭಿವೃದ್ಧಿ ದೊಡ್ಡ ನಗರಕ್ಕೆ ಸೀಮಿತವಾಗದೆ ಮೈಸೂರು ಮೊದಲಾದ ಎರಡನೇ ಹಂತದ ಹಾಗೂ ಸಣ್ಣ ನಗರಗಳಿಗೂ ತಲುಪಬೇಕು ಎಂದು ಸರ್ಕಾರ ಚಿಂತಿಸಿದೆ. ಎಂಎಸ್‌ಎಂಇ ಉತ್ತೇಜಿಸಲು ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಸೃಷ್ಟಿ ಮತ್ತು ಕೌಶಲಾಭಿವೃದ್ಧಿಗೆ ಒತ್ತು ನೀಡಬೇಕು’ ಎಂದು ಅಭಿಪ್ರಾಯಪಟ್ಟರು.

‘ಸ್ಥಳೀಯ ಯುವ ಸಮೂಹಕ್ಕೆ ಉದ್ಯೋಗಾನುಭವ ಕಲ್ಪಿಸಲು ‘ಮೈಕ್ರೊ–ಇಂಟರ್ನ್‌ಶಿಪ್’ ಯೋಜನೆಗೆ ಆದ್ಯತೆ ನೀಡಬೇಕು. 3ರಿಂದ 6 ತಿಂಗಳ ಅವಧಿಯ ತರಬೇತಿಯಲ್ಲಿ ವಿದ್ಯಾರ್ಥಿಗಳಿಗೆ ಗೌರವಧನವನ್ನು ಸರ್ಕಾರ ಮತ್ತು ಸಂಸ್ಥೆಗಳು ಸಮಾನವಾಗಿ ಭರಿಸುವ ವ್ಯವಸ್ಥೆಯಾಗಬೇಕು. ಇದರಿಂದ ವಿದ್ಯಾರ್ಥಿಗಳಿಗೆ ಅನುಭವ ಸಿಗುವುದರ ಜೊತೆಗೆ ಎಂಎಸ್‌ಎಂಇ ಗಳಿಗೆ ಕಡಿಮೆ ವೆಚ್ಚದಲ್ಲಿ ತಜ್ಞರ ನೆರವು ದೊರೆಯಲಿದೆ’ ಎಂದು ಸಲಹೆ ನೀಡಿದರು.

ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಕೆ.ಬಿ. ಲಿಂಗರಾಜು, ಮೈಸೂರು ಕೈಗಾರಿಕೋದ್ಯಮಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್‌ಕುಮಾರ್ ಜೈನ್, ಚಾಮರಾಜನಗರ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟದ ಅಧ್ಯಕ್ಷ ಪ್ರಭಾಕರ, ಮಂಡ್ಯ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟದ ಅಧ್ಯಕ್ಷ ಪ್ರಭಾಕರ್, ಎಸ್‌ಟಿ– ಎಸ್‌ಟಿ ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ವಿಜಯಶಂಕರ್ ಭಾಗವಹಿಸಿದ್ದರು.