ಚಾಮರಾಜನಗರ : ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಕ್ಷೇತ್ರಕ್ಕೆ ಯುಗಾದಿ ಜಾತ್ರಾ ಮಹೋತ್ಸವ ಹಾಗೂ ಸರಣಿ ರಜಾ ದಿನಗಳ ಹಿನ್ನೆಲೆಯಲ್ಲಿ ಲಕ್ಷಾಂತರ ಭಕ್ತರು ಭೇಟಿ ನೀಡಿದ್ದು, ಆರಾಧ್ಯ ದೈವ ಮಾದಪ್ಪನಿಗೆ ಒಟ್ಟು ಕೋಟ್ಯಂತರ ರೂಪಾಯಿ ಕಾಣಿಕೆ ಸಮರ್ಪಣೆಯಾಗಿದೆ.
ಕೇವಲ 23 ದಿನಗಳ ಅವಧಿಯಲ್ಲಿ ಮಾದಪ್ಪನ ಹುಂಡಿಯಲ್ಲಿ ಬರೋಬ್ಬರಿ 2.33 ಕೋಟಿ ರೂಪಾಯಿ ನಗದು ಸಂಗ್ರಹವಾಗಿದೆ. ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯಿತು.
ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಇ ರಘು ಅವರ ಸಮ್ಮುಖದಲ್ಲಿ ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ಅತ್ಯಂತ ಪಾರದರ್ಶಕವಾಗಿ ಈ ಎಣಿಕೆ ಪ್ರಕ್ರಿಯೆ ಪೂರ್ಣಗೊಂಡಿದೆ.
ಸಂಗ್ರಹವಾದ ಒಟ್ಟು ಕಾಣಿಕೆ ವಿವರ ನಗದು : 2,33,84,201 ರೂ., ಚಿನ್ನ : 21 ಗ್ರಾಂ, ಬೆಳ್ಳಿ : 800 ಗ್ರಾಂ, ಡಿಜಿಟಲ್ ಪಾವತಿ (PhonePe/G-Pay): 5,78,897 ರೂ., ವಿಶೇಷ : ಚಲಾವಣೆ ರದ್ದಾಗಿರುವ 2000 ರೂ., ಮುಖಬೆಲೆಯ 3 ನೋಟುಗಳು ಹಾಗೂ 4 ವಿದೇಶಿ ನೋಟುಗಳು ಸಹ ಹುಂಡಿಯಲ್ಲಿ ಪತ್ತೆಯಾಗಿವೆ.















