ಬೆಂಗಳೂರು : ಉತ್ತರ ಪ್ರದೇಶದಲ್ಲಿ ಪೂಜಾರಿಯಾಗಿದ್ದ ವ್ಯಕ್ತಿಯೊಬ್ಬ ಬೆಂಗಳೂರಲ್ಲಿ ಡ್ರಗ್ ಪೆಡ್ಲರ್ ಆಗಿ ಬಂಧನಕ್ಕೊಳಗಾಗಿರುವ ಘಟನೆ ಆಡುಗೋಡಿಯಲ್ಲಿ ನಡೆದಿದೆ. ಆಡುಗೋಡಿ ಪೊಲೀಸರಿಂದ ಹೆರಾಯಿನ್ ಸಪ್ಲೈ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಬಲ್ಜಿತ್ ಸಿಂಗ್ ಹಾಗೂ ಅರ್ಜುನ್ ಜೋಶಿ ಬಂಧಿತ ಆರೋಪಿಗಳು.
ಅರ್ಜುನ್ ಜೋಶಿ ಬೆಂಗಳೂರು ಮೂಲದ ವ್ಯಕ್ತಿ. ಡೆಲಿವರಿ ಕೆಲಸ ಮಾಡಿಕೊಂಡು ಹೆರಾಯಿನ್ ಮಾರಾಟ ಮಾಡುತ್ತಿದ್ದ. ಉತ್ತರ ಪ್ರದೇಶ ಮೂಲದ ಬಲ್ಜಿತ್ ಸಿಂಗ್ ಬಳಿ ಹೆರಾಯಿನ್ ಖರೀದಿ ಮಾಡುತ್ತಿದ್ದ. ಮೊದಲು ಕನ್ಸೂಮರ್ ಆಗಿದ್ದ ಅರ್ಜುನ್ ನಂತರ ಪೆಡ್ಲಿಂಗ್ ಮಾಡಲು ಮುಂದಾಗಿದ್ದ. ಬಲ್ಜಿತ್ ಬಳಿ ಹೆರಾಯಿನ್ ಖರೀದಿ ಮಾಡಿ ಮಾರಾಟ ಮಾಡುತ್ತಿದ್ದ. ಹೆರಾಯಿನ್ ಮಾರಲು ಬೆಂಗಳೂರಿಗೆ ಬಂದಾಗ ಆಡುಗೋಡಿ ಪೊಲೀಸರಿಗೆ ಬಲ್ಜಿತ್ ಸಿಕ್ಕಿಬಿದ್ದಿದ್ದ.
ಈ ವಿಚಾರಣೆ ವೇಳೆ ತಾನೊಬ್ಬ ಸಿಖ್ ಪೂಜಾರಿ ಎಂದು ಆರೋಪಿ ಬಲ್ಜಿತ್ ಹೇಳಿಕೊಂಡಿದ್ದಾನೆ. ಯುಪಿಯಲ್ಲಿ ಪೂಜಾರಿ ಕೆಲಸ ಮಾಡಿಕೊಂಡು ಪಾರ್ಟ್ ಟೈಮ್ ಹೆರಾಯಿನ್ ಮಾರಾಟ ಮಾಡುತ್ತಿದ್ದ. ಸದ್ಯ ಬಂಧಿತ ಆರೋಪಿಗಳಿಂದ 162 ಗ್ರಾಂ ಹೆರಾಯಿನ್ ಮತ್ತು ಮೂರು ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.















